×
Ad

ದುಲ್ಕರ್ ಸಲ್ಮಾನ್ ಬಾಲಿವುಡ್‌ಗೆ

Update: 2017-08-18 16:56 IST

ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಮಲಯಾಳಂ ನಟ ದುಲ್ಕರ್ ಸಲ್ಮಾನ್‌ರ ಚಿತ್ರಬದುಕಿಗೆ ಇದೀಗ ಮತ್ತೊಂದು ಹೊಸ ಬ್ರೇಕ್ ದೊರೆತಿದೆ. ಹೌದು. ಶೀಘ್ರದಲ್ಲೇ ಅವರು ಬಾಲಿವುಡ್ ಪ್ರವೇಶಿಸಲಿದ್ದಾರೆ.

ರೋಡ್‌ಜರ್ನಿಯ ಕಥಾವಸ್ತುವನ್ನು ಹೊಂದಿರುವ ಇನ್ನೂ ಹೆಸರಿಡದ ಬಾಲಿವುಡ್ ಚಿತ್ರವೊಂದರಲ್ಲಿ ದುಲ್ಕರ್ ನಾಯಕನಾಗಿ ನಟಿಸಲಿದ್ದಾರೆ. ‘ಗರ್ಲ್‌ಇನ್ ದಿ ಸಿಟಿ’ ಹಾಗೂ ‘ಲಿಟಲ್‌ಥಿಂಗ್ಸ್’ ಎಂಬ ಇಂಟರ್‌ನೆಟ್ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾವಂತ ನಟಿ ಮಿಥಿಲಾಪಾಲ್ಕರ್ ಈ ಚಿತ್ರದ ಹಿರೋಯಿನ್. ಹೆಸರಾಂತ ಬಾಲಿವುಡ್ ನಟ ಇರ್ಫಾನ್ ಖಾನ್‌ಗೂ ಈ ಚಿತ್ರದಲ್ಲಿ ಮುಖ್ಯಪಾತ್ರವೊಂದಿದೆಯಂತೆ.

ಮಲಯಾಳಂನ ಸೂಪರ್‌ಸ್ಟಾರ್ ಮುಮ್ಮುಟ್ಟಿ ಪುತ್ರನಾದ ದುಲ್ಕರ್ ಮಲಯಾಳಂನಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಆತ ಅಭಿನಯಿಸಿದ ‘ಚಾರ್ಲಿ’, ‘ಬೆಂಗಳೂರು ಡೇಸ್’, ‘ಉಸ್ತಾದ್ ಹೊಟೇಲ್’, ‘ಕಲಿ’ ಭರ್ಜರಿ ಯಶಸ್ಸು ಕಂಡಿವೆ.

ಮಣಿರತ್ನಂ ನಿರ್ದೇಶನದ ‘ಓ.ಕೆ. ಕಣ್ಮಣಿ’ ಚಿತ್ರದಲ್ಲಿ ನಟಿಸುವ ಮೂಲಕ ತಮಿಳಿಗೂ ಎಂಟ್ರಿ ಕೊಟ್ಟ ದುಲ್ಕರ್ ಅಲ್ಲೂ ಗೆಲುವಿನ ಸವಿಯುಂಡಿದ್ದಾರೆ. ಇದೀಗ ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷಿಸಲು ಸಜ್ಜಾಗುತ್ತಿದ್ದಾರೆ.

ನವ ನಿರ್ದೇಶಕ ಆಕರ್ಷ್ ಖುರಾನಾ ನಿರ್ದೇಶನದ ಈ ಚಿತ್ರದ ನಾಯಕ ಪಾತ್ರದ ಕೊಡುಗೆಯನ್ನು ಅಭಿಷೇಕ್‌ಗೆ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅಭಿಷೇಕ್ ಹಿಂದೆ ಸರಿದಿದ್ದರಿಂದ ಆ ಪಾತ್ರವೀಗ ದುಲ್ಕರ್ ಪಾಲಾಗಿದೆ.

ರಸ್ತೆ ಪ್ರಯಾಣವೊಂದರಲ್ಲಿ ಸ್ನೇಹಿತರಾಗುವ ದುಲ್ಕರ್ ಹಾಗೂ ಇರ್ಫಾನ್ ಸುತ್ತ ತಿರುಗುವ ಈ ಚಿತ್ರವು ಲಘು ಕಾಮಿಡಿ ಕಥಾವಸ್ತುವನ್ನು ಹೊಂದಿದೆ. ಚಿತ್ರದ ಬಹುತೇಕ ಭಾಗ ಕೇರಳದಲ್ಲಿಯೇ ಚಿತ್ರೀಕರಣಗೊಳ್ಳಲಿದೆಯಂತೆ.

‘ಕಾಮ್ರೇಡ್ ಇನ್ ಅಮೆರಿಕ’ ಇತ್ತೀಚೆಗೆ ತೆರೆಕಂಡ ದುಲ್ಕರ್ ಅಭಿನಯದ ಹೊಸ ಚಿತ್ರ. ಪ್ರಸ್ತುತ ಅವರು ಬಿಜಯ್ ನಂಬಿಯಾರ್ ನಿರ್ದೇಶನದ ತಮಿಳು- ಮಲಯಾಳಂ ದ್ವಿಭಾಷಾ ಚಿತ್ರ ‘ಸೊಲೊ’ ಶೂಟಿಂಗ್‌ನಲ್ಲಿ ಬಿಸಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News