ಈ ಖ್ಯಾತ ನಿರ್ದೇಶಕನ ಚಿತ್ರ ನಿರ್ಮಾಣವಾದ 29 ವರ್ಷಗಳ ಬಳಿಕ ಈಗ ಬಿಡುಗಡೆ !

Update: 2017-08-19 10:21 GMT

ಹೊಸದಿಲ್ಲಿ, ಆ.19: ಸುಮಾರು 29 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಬಾಲಿವುಡ್ ಚಿತ್ರವೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರ 1988ರಲ್ಲಿ ನಿರ್ಮಾಣವಾಗಿತ್ತು. ಖ್ಯಾತ ಸಾಹಿತಿ-ನಿರ್ದೇಶಕ ಗುಲ್ಝಾರ್  ನಿರ್ದೇಶನದ ‘ಲಿಬಾಸ್’ ಚಿತ್ರ ಈ ವರ್ಷದ ಅಂತ್ಯದಲ್ಲಿ ಅಂದರೆ ಚಿತ್ರ ನಿರ್ಮಾಣವಾದ ಬರೋಬ್ಬರಿ 29  ವರ್ಷಗಳ ಬಳಿಕ ತೆರೆಕಾಣಲಿದೆ.

ಚಿತ್ರದಲ್ಲಿ ಖ್ಯಾತ ನಟ ನಾಸಿರುದ್ದೀನ್ ಶಾ ಹಾಗೂ ಶಬನಾ ಅಝ್ಮಿ ನಟಿಸಿದ್ದಾರೆ. ಗುಲ್ಝಾರ್ ರ 83ನೆ ಹುಟ್ಟುಹಬ್ಬದ ಸಂದರ್ಭ ಚಿತ್ರ ಬಿಡುಗಡೆಯ ವಿತರಕ ಸಂಸ್ಥೆ ಝೀ ಸ್ಟುಡಿಯೋಸ್ ಘೋಷಿಸಿದೆ.

ಗುಲ್ಝಾರ್ ರ ಸಣ್ಣ ಕತೆ ‘ಸೀಮಾ’ವನ್ನು ಆಧರಿಸಿದ ಚಿತ್ರ ‘ಲಿಬಾಸ್’ ನಲ್ಲಿ ನಾಸಿರುದ್ದೀನ್ ಶಾ ಹಾಗೂ ಶಬನಾ ಅಝ್ಮಿ ನಟಿಸಿದ್ದಾರೆ. ಚಿತ್ರದಲ್ಲಿ ರಾಜ್ ಬಬ್ಬರ್, ಸುಷ್ಮಾ ಸೇಠ್, ಉತ್ಪಲ್ ದತ್, ಅನ್ನು ಕಪೂರ್ ಹಾಗೂ ಸವಿತಾ ಬಜಾಜ್ ನಟಿಸಿದ್ದಾರೆ. ಆರ್.ಡಿ. ಬರ್ಮನ್ ಸಂಗೀತ ನಿರ್ದೇಶಿಸಿದ್ದಾರೆ. ವಿಕಾಸ್ ಮೋಹನ್ ಈ ಚಿತ್ರದ ನಿರ್ಮಾಪಕರು.

“ಈ ಯೋಜನೆಯ ಭಾಗವಾಗಿರುವುದಕ್ಕೆ ಸಂತೋಷವಿದೆ. ಆ ಸಂದರ್ಭದಲ್ಲಿ ಕೆಲ ಕಾರಣಗಳಿಂದ ಚಿತ್ರ ಬಿಡುಗಡೆಯಾಗಿರಲಿಲ್ಲ. ಇದು ನನ್ನ ತಂದೆಯ ಕನಸಾಗಿದ್ದು, ಕೊನೆಗೂ ನನಸಾಗುತ್ತಿದೆ” ಎಂದು ವಿಕಾಸ್ ಮೋಹನ್ ರ ಪುತ್ರ ಅಮುಲ್ ಹೇಳಿದ್ದಾರೆ.

22 ವರ್ಷಗಳ ನಂತರ 2014ರ ನವೆಂಬರ್ 22ರಂದು ಗೋವಾದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಲಿಬಾಸ್ ಪ್ರದರ್ಶನ ಕಂಡಿತ್ತು. 1992ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತ್ತು.

ಖ್ಯಾತ ಕವಿ ಹಾಗೂ ಸಾಹಿತಿ ಗುಲ್ಝಾರ್ 1971ರಲ್ಲಿ ‘ಮೇರೆ ಅಪ್ನೆ’ ಚಿತ್ರದ ಮೂಲಕ ನಿರ್ದೇಶಕನಾಗಿದ್ದರು. ಆನಂತರ ಪರಿಚಯ್, ಆನಂದಿ, ಮೌಸಮ್, ಅಂಗೂರ್, ಇಜಾಝತ್, ಲೇಕಿನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News