ಕಾಫಿ ತೋಟ: ಒಂದು ಸಾವಿನ ಸುತ್ತ...

Update: 2017-08-19 18:41 GMT

ಕನ್ನಡ ಕಿರುತೆರೆ ಧಾರಾವಾಹಿ ಮಾದರಿಯಲ್ಲಿ ನಿರ್ದೇಶಕ ಟಿ.ಎನ್.ಸೀತಾರಾಂ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ವಿಶಿಷ್ಟ ಕೌಟುಂಬಿಕ ಧಾರಾವಾಹಿಗಳ ಮೂಲಕ ಅವರು ದೊಡ್ಡ ವೀಕ್ಷಕ ಬಳಗವನ್ನು ಸೆಳೆದಿದ್ದರು. ವಿಶೇಷವಾಗಿ ಅವರ ಧಾರಾವಾಹಿಗಳ ಕೋರ್ಟ್ ರೂಮ್ ಡ್ರಾಮಾ ಸನ್ನಿವೇಶಗಳು ನೋಡುಗರನ್ನು ಆಕರ್ಷಿಸುತ್ತಿದ್ದವು. ಈಗ ‘ಕಾಫಿ ತೋಟ’ದಲ್ಲೂ ಅವರು ಕೋರ್ಟ್ ಸನ್ನಿವೇಶಗಳನ್ನು ತಂದಿದ್ದಾರೆ. ತಮ್ಮ ನೆಚ್ಚಿನ ಕ್ರೈಂ, ಥ್ರಿಲ್ಲರ್ ವಸ್ತು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಇಂತಹ ಕತೆಗಳನ್ನು ತೆರೆ ಮೇಲೆ ನೋಡಿರುವವರಿಗೆ ಸಿನೆಮಾ ವಿಶೇಷ ಎನಿಸುವುದಿಲ್ಲ. ನಿರೂಪಣೆಯಲ್ಲಿ ನವೀನತೆ ಇಲ್ಲದ್ದರಿಂದ ಇದು ಮತ್ತೊಂದು ಸಾಧಾರಣ ಸಿನೆಮಾಗಳ ಪಟ್ಟಿಗೆ ಸೇರ್ಪಡೆಯಾಗುತ್ತದಷ್ಟೆ.

ದೊಡ್ಡ ಎಸ್ಟೇಟ್‌ವೊಂದರ ಮಾಲಕಳಾದ ಯುವತಿಯ ಪ್ರೀತಿ ಮತ್ತು ಆಕೆಯ ಆಸ್ತಿ ಕಬಳಿಸಲು ಸುತ್ತಲಿನವರು ನಡೆಸುವ ಹುನ್ನಾರ ಚಿತ್ರದ ಕಥಾವಸ್ತು. ಸಿನೆಮಾದ ಮೊದಲಾರ್ಧದಲ್ಲಿ ಪ್ರೀತಿಯ ಕತೆಯಿದೆ. ಮಧ್ಯಂತರದಲ್ಲಿ ಯುವತಿಯ ಸಾವಿನ ನಂತರ ಮೂರ್ನಾಲ್ಕು ತಿರುವುಗಳು ಕತೆಗೊಂದಿಷ್ಟು ಚುರುಕುತನ ತರುತ್ತವೆ. ಈ ಹಂತದಲ್ಲಿ ಪ್ರೇಕ್ಷಕರು ಕೂಡ ಕೊಲೆಗಾರ ಯಾರೆನ್ನುವುದನ್ನು ಊಹಿಸತೊಡಗುತ್ತಾರೆ. ಇಲ್ಲಿ ನಿರ್ದೇಶಕ ಸೀತಾರಾಂ ದೊಡ್ಡ ತಿರುವೊಂದರ ಮೂಲಕ ಅಚ್ಚರಿ ಮೂಡಿಸುತ್ತಾರಾದರೂ, ನೀರಸ ನಿರೂಪಣೆಯಿಂದಾಗಿ ಅದು ಪ್ರೇಕ್ಷಕರನ್ನು ತಟ್ಟುವುದೇ ಇಲ್ಲ. ಹೀಗೆ ಒಂದೊಳ್ಳೆಯ ಥ್ರಿಲ್ಲರ್ ಆಗಬಹುದಾಗಿದ್ದ ಸಿನೆಮಾ ಕೆಲವು ಮಿತಿಗಳೊಂದಿಗೆ ಮುಕ್ತಾಯವಾಗುತ್ತದೆ.

ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರವನ್ನು ಆಕರ್ಷಕವಾಗಿಸಿದೆ. ಮಲೆನಾಡು, ಕರಾವಳಿಯ ಸುಂದರ ತಾಣಗಳನ್ನು ಅವರು ಕಣ್ಣಿಗೆ ತಂಪೆನಿಸುವಂತೆ ಸೆರೆಹಿಡಿದಿದ್ದಾರೆ. ದ್ರೋಣ್‌ನಲ್ಲಿ ಅವರು ತೋರಿಸಿರುವ ಏರಿಯಲ್ ಶಾಟ್‌ಗಳು ಚಿತ್ರದ ತಾಂತ್ರಿಕ ಶ್ರೀಮಂತಿಕೆ ಹೆಚ್ಚಿಸಿವೆ ಎಂದೇ ಹೇಳಬಹುದು. ಆದರೆ ಇದೇ ಮಾತನ್ನು ಸಂಗೀತ ಸಂಯೋಜನೆಗೆ ಸಂಬಂಧಿಸಿದಂತೆ ಹೇಳಲು ಸಾಧ್ಯವಿಲ್ಲ. ಅನೂಪ್ ಸಿಳೀನ್ ಸಂಗೀತ ಸಂಯೋಜಿಸಿರುವ ಹಾಡುಗಳು ಥಿಯೇಟರ್‌ನಿಂದ ಹೊರಬಂದ ನಂತರ ನೆನಪಾಗುವುದಿಲ್ಲ. ಹಿನ್ನೆಲೆ ಸಂಗೀತದಲ್ಲಿ ಕೂಡ ಒಂದಷ್ಟು ಚುರುಕುತನ ಬೇಕಿತ್ತು.

ಇನ್ನು ನಟನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬಹುದಿನಗಳ ನಂತರ ರಘು ಮುಖರ್ಜಿ ಅವರಿಗೆ ಒಂದೊಳ್ಳೆಯ ಪಾತ್ರವಿದ್ದು ಅವರು ಸೊಗಸಾಗಿ ನಟಿಸಿದ್ದಾರೆ. ಟಿ.ಎನ್.ಸೀತಾರಾಂ ಮತ್ತು ಸುಧಾ ಬೆಳವಾಡಿ ವಕೀಲ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸನ್ನು ತಿಳಿಯಾಗಿಸುತ್ತವೆ. ಇತ್ತೀಚೆಗೆ ತೆರೆಕಾಣುತ್ತಿರುವ ಸಿನೆಮಾಗಳ ಪೈಕಿ ಕೊಂಚ ಭಿನ್ನ ಕಥಾವಸ್ತು ಇದೆ ಎನ್ನುವ ಕಾರಣದಿಂದಾಗಿ ಈ ಪ್ರಯೋಗ ಜನರಿಗೆ ಇಷ್ಟವಾಗಬಹುದು.

ನಿರ್ದೇಶನ: ಟಿ.ಎನ್.ಸೀತಾರಾಂ, ನಿರ್ಮಾಣ: ಮನ್ವಂತರ ಫಿಲ್ಮ್ಸ್, ಸಂಗೀತ: ಅನೂಪ್ ಸಿಳೀನ್ ಮತ್ತು ಮಿಥುನ್ ಮುಕುಂದನ್, ಛಾಯಾಗ್ರಹಣ: ಅಶೋಕ್ ಕಶ್ಯಪ್,

ತಾರಾಗಣ: ರಘು ಮುಖರ್ಜಿ, ರಾಧಿಕಾ ಚೇತನ್, ಟಿ.ಎನ್.ಸೀತಾರಾಂ, ಸಂಯುಕ್ತಾ ಹೊರ್ನಾಡು, ಸುಂದರ್ ರಾಜ್, ವೀಣಾ ಸುಂದರ್, ಅಪೇಕ್ಷಾ ಪುರೋಹಿತ್ ಮತ್ತಿತರರು.

ರೇಟಿಂಗ್ - **1/2

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News