ಗೋರಖ್‌ಪುರದ ಗೋಮುಖ ಯೋಗಿ ಆದಿತ್ಯನಾಥ್

Update: 2017-08-20 07:14 GMT

ಶ್ರೀಕೃಷ್ಣ ಜನ್ಮಾಷ್ಟಮಿ ಎನ್ನುವುದು ಪುಟ್ಟ ಕಂದಮ್ಮಗಳಿಗೆ ಕೃಷ್ಣನಂತೆ ಶೃಂಗಾರ ಮಾಡಿ, ಪುಟ್ಟ ಪುಟ್ಟ ಪಾದಗಳನ್ನು ಮನೆಯ ಅಂಗಳದಲ್ಲಿ ಅದ್ದಿ ಆನಂದಿಸುವ ಹಬ್ಬ. ಆದರೆ ಹಬ್ಬ ಆಚರಿಸಬೇಕಾದ 70ಕ್ಕೂ ಹೆಚ್ಚು ಕಂದಮ್ಮಗಳು ಉತ್ತರ ಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಯಾರದೋ ಸ್ವಾರ್ಥಕ್ಕೆ ಬಲಿಯಾಗಿದ್ದವು. ಆಮ್ಲಜನಕದ ಕೊರತೆಯೋ, ಮೆದುಳು ನಂಜಿನ ಕಾಯಿಲೆಯೋ, ವೈದ್ಯರ ನಿರ್ಲಕ್ಷ್ಯವೋ ಅಥವಾ ದುರಾಡಳಿತದ ಫಲವೋ ಅಂತೂ ಮಹಾಕ್ರೌರ್ಯವೊಂದು ಘಟಿಸಿಹೋಗಿದೆ.

ಉಸಿರಿಗಾಗಿ ವಿಲವಿಲ ಒದ್ದಾಡಿ ಕಣ್ಮುಂದೆಯೇ ಕೊನೆಯುಸಿರೆಳೆದ ಕಂದಮ್ಮಗಳನ್ನು ಕಂಡ ಪೋಷಕರು ಭೂಮಿಗೆ ಇಳಿದುಹೋಗಿದ್ದರು. ಈ ಪೋಷಕರು ಸಾಮಾಜಿಕವಾಗಿ ಸದೃಢರಲ್ಲ, ಆರ್ಥಿಕವಾಗಿ ಸಬಲರಲ್ಲ, ವಿದ್ಯಾವಂತರೂ ಅಲ್ಲ. ಬಡತನವೇ ಅವರಿಗೊಂದು ಬರೆ, ಅದರಲ್ಲಿ ಕಂದಮ್ಮಗಳ ಕಗ್ಗೊಲೆ ಬೇರೆ. ಕಂದಮ್ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರ ಕಡಲಲ್ಲಿ ಕಳೆದುಹೋಗಿದ್ದರೆ; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಕ್ಕಳ ಮಾರಣಹೋಮವನ್ನು ನೋಡಿಯೂ, ‘‘ಶ್ರೀಕೃಷ್ಣ ಜನ್ಮಾಷ್ಟಮಿ ಸಾಂಪ್ರದಾಯಿಕವಾಗಿ ಪ್ರಮುಖವಾದ ಹಬ್ಬ, ಅತ್ಯಂತ ಅದ್ದೂರಿಯಿಂದ ಆಚರಿಸಬೇಕು’’ ಎಂದು ಅಧಿಕಾರಿಗಳಿಗೆ ಕರೆ ಕೊಟ್ಟಿದ್ದರು. ಬಾಯಲ್ಲಿ ಕೃಷ್ಣ, ಕೈಯಲ್ಲಿ ಕಂಸ... ಎಂತಹ ವಿಪರ್ಯಾಸ.

ಸಾಲದು ಎಂದು ‘‘ಮಕ್ಕಳು ಮೃತಪಟ್ಟಿರುವುದು ಮೆದುಳು ನಂಜಿನಿಂದ, ಆಮ್ಲಜನಕ ಕೊರತೆಯಿಂದ ಅಲ್ಲ’’ ಎಂದು ಖಾವಿಧಾರಿ ಯೋಗಿ ಆದಿತ್ಯನಾಥ್ ಸ್ಪಷ್ಟನೆ ನೀಡಿದ್ದರು. ಸಮರ್ಥನೆಗೂ ಒಂದು ಮಿತಿ ಬೇಡವೇ? ಮನುಷ್ಯತ್ವಕ್ಕೆ ಬೆಲೆಯೇ ಇಲ್ಲವೇ? ಇದನ್ನು ಕೇಳಿದ ಕ್ಷಣದಿಂದ ಯೋಗಿಯನ್ನು ಕಟುಕನ ಸ್ಥಾನದಲ್ಲಿ ನಿಲ್ಲಿಸಲೂ ಮನಸ್ಸಾಗುತ್ತಿಲ್ಲ. ಈತ ಅದಕ್ಕಿಂತಲೂ ಕೆಟ್ಟ ಮನಸ್ಥಿತಿಯುಳ್ಳ, ಮನುಷ್ಯ ಸಂವೇದನೆಗಳನ್ನು ಕಳೆದುಕೊಂಡ ವಿಚಿತ್ರ ಪ್ರಾಣಿ ಎನಿಸತೊಡಗಿದೆ.

ಯೋಗಿಯ ಈ ಮನುಷ್ಯದ್ವೇಷಿ ನಡವಳಿಕೆ, ಹೇಳಿಕೆ ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಾಮಾಜಿಕ ಸ್ವಾಸ್ಥವನ್ನು ಕುಲಗೆಡಿಸಿದ್ದಿದೆ. ರಾಮ ಜನ್ಮಭೂಮಿ ವಿವಾದದಿಂದ ಹಿಡಿದು ಗೋರಖ್‌ಪುರದ ಮಕ್ಕಳ ಮಾರಣಹೋಮದವರೆಗೆ ಅವರು ಆಡಿದ ಮಾತುಗಳನ್ನು, ತೆಗೆದುಕೊಂಡ ನಿಲುವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಧರಿಸುವ ಖಾವಿಗೂ, ಅವರು ನಡೆನುಡಿಗೂ ಅಜಗಜಾಂತರ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ. ಆತ ಸಂತನೋ, ಸಾಮಾನ್ಯನೋ ಆಗಿದ್ದಾಗ ಸರಿ. ಆದರೆ ಒಂದು ರಾಜ್ಯದ ಮುಖ್ಯಮಂತ್ರಿಯಾದಾಗ, ಆ ಸ್ಥಾನಕ್ಕೆ ಘನತೆ ತರಬಾರದೆ?
ಅಂದಹಾಗೆ, 45 ವಯಸ್ಸಿನ ಆದಿತ್ಯನಾಥ್ ಈ ಮೊದಲು ನಮ್ಮ ನಿಮ್ಮಂತೆಯೇ ಸಾಮಾನ್ಯರಂತಿ ದ್ದವರು. ಕಷ್ಟ ಸುಖ ಬಲ್ಲವರು. ಬಿಎಸ್ಸಿ ಪದವಿ ಕೂಡ ಪಡೆದವರು. ಮುಂದೆ ಮನೆ ಬಿಟ್ಟು, ನಾಥ ಪಂಥದ ದೀಕ್ಷೆ ಪಡೆಡು ತಮ್ಮ ಹೆಸರನ್ನು ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಿಕೊಂಡರು. ಆ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ರಾಮ ಜನ್ಮಭೂಮಿ ಹೋರಾಟ ಉತ್ತುಂಗದಲ್ಲಿತ್ತು. ಸಹಜವಾಗಿ ಇದು ಆದಿತ್ಯನಾಥ್ ಮೇಲೆಯೂ ಪ್ರಭಾವ ಬೀರಿತ್ತು. 1994ರಲ್ಲಿ ಸನ್ಯಾಸತ್ವ ಸ್ವೀಕರಿಸಿ, 96ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು.

ರಾಮ ಜನ್ಮಭೂಮಿ ಹೋರಾಟದ ಮುಂಚೂಣಿಯಲ್ಲಿದ್ದ ಮಾಜಿ ಸಂಸದ ಮಹಾಂತಾ ಅವೈದ್ಯನಾಥ್ ಸಂಪರ್ಕಕ್ಕೆ ಬಂದ ಯೋಗಿ, ನಂತರ ಅವರ ಉತ್ತರಾಧಿಕಾರಿ ಪಟ್ಟವನ್ನು ಅಲಂಕರಿಸಿದರು. ದೇವಸ್ಥಾನಕ್ಕೆ ಮುಖ್ಯಸ್ಥರಾದರು, ಖಾವಿಧಾರಿಗಳಿಗೆ ಗುರುವಾದರು. ವೃತ್ತಿ ರಾಜಕಾರಣಿಗಳ ಆಟ-ಹಾರಾಟ ನೋಡಿ ಸಾಕಾಗಿಹೋಗಿದ್ದ ಉತ್ತರ ಪ್ರದೇಶದ ಜನಕ್ಕೆ ಯೋಗಿ ಭಿನ್ನವಾಗಿ ಕಂಡರು. 1998ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸಂಸದರಾದರು. ತಮ್ಮ ದ್ವೇಷ ಭಾಷಣದ ಮೂಲಕ ಬಿಜೆಪಿ ವಲಯದಲ್ಲಿ ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡರು.

ಯೋಗಿಯವರ ಮೊದಲ ವಿವಾದ ಆರಂಭವಾಗಿದ್ದು 1999ರಲ್ಲಿ. ಅಂದು ಮಹಾರಾಜ್‌ಗಂಜ್ ಜಿಲ್ಲೆಯ ಪಂಚ್ ರುಖಿಯಾ ಗ್ರಾಮದಲ್ಲಿ ಸ್ಮಶಾನಭೂಮಿಯನ್ನು ವಶಕ್ಕೆ ಪಡೆಯಲು ಅಲ್ಲಿ ಅಶ್ವತ್ಥ ಮರಗಳನ್ನು ನೆಡಿಸಿದ್ದರು. ಖಬರಸ್ತಾನ್ ಮತ್ತು ಸ್ಮಶಾನಗಳಿಗೆ ಸ್ಥಳ ಮೀಸಲಿಡುವ ವಿಚಾರದಲ್ಲಿ ವಿವಾದ ಹುಟ್ಟುಹಾಕಲಾಗಿತ್ತು. ಆಗ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಹಲವು ಕೇಸುಗಳನ್ನು ದಾಖಲಿಸಲಾಗಿತ್ತು. 2007ರಲ್ಲಿ ಇನ್ನೇನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ, ಗೋರಖ್‌ಪುರ ಕೋಮು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಆದಿತ್ಯನಾಥ್‌ರನ್ನು 15 ದಿನ ಜೈಲಿಗೆ ಹಾಕಿದ್ದರು. ಜೈಲಿನಿಂದ ಬಿಡಿಸಿಕೊಳ್ಳಲು ಪಕ್ಷದ ನಾಯಕರು ಬರಲಿಲ್ಲವೆಂದು ಬಂಡೆದ್ದು, ಬಿಜೆಪಿ ವಿರುದ್ಧವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು, ಬಿಜೆಪಿಗೇ ತಲೆನೋವಾಗಿದ್ದರು.

‘‘ಕಳೆದ ಎರಡೂವರೆ ವರ್ಷಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ 450 ಮತೀಯ ಗಲಭೆಗಳಾಗಿವೆ. ಈ ಗಲಭೆಗಳು ಸಮಾಜವಾದಿ ಆಡಳಿತದಲ್ಲಿ ನಡೆದದ್ದು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಆದಂತೆ ಪೂರ್ವ ಉತ್ತರ ಪ್ರದೇಶದಲ್ಲಿ ಯಾಕೆ ಗಲಭೆಗಳಾಗುತ್ತಿಲ್ಲವೆಂದರೆ ಅಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಬಹಳ ಕಡಿಮೆ ಇದೆ’’ ಎಂದು ಅಲ್ಪಸಂಖ್ಯಾತರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿದ್ದರು.

‘‘ಪಶ್ಚಿಮ ಉತ್ತರ ಪ್ರದೇಶದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ಉತ್ತರ ಪ್ರದೇಶದ ಭವಿಷ್ಯದ ಮೇಲೆ ಮಾರಕವಾಗಲಿದೆ. ಬಿಜೆಪಿಯು ಪಶ್ಚಿಮ ಉತ್ತರ ಪ್ರದೇಶವನ್ನು ಮತ್ತೊಂದು ಕಾಶ್ಮೀರವನ್ನಾಗಿಸಲು ಬಿಡುವುದಿಲ್ಲ’’ ಎಂದು ದ್ವೇಷದ ಕಿಡಿ ಕಾರಿದ್ದರು. ಅಷ್ಟೇ ಅಲ್ಲ, ‘‘ಮದರ್ ತೆರೇಸಾ ಅವರು ಭಾರತವನ್ನು ಕ್ರಿಶ್ಚಿಯನೀಕರಣವಾಗಿಸುವ ಷಡ್ಯಂತ್ರದ ಒಂದು ಭಾಗವಾಗಿದ್ದರು. ಹಿಂದೂಗಳ ಬಳಿಗೆ ಸೇವೆ ಮಾಡುವ ನೆಪದಲ್ಲಿ ಬಂದು ಅವರನ್ನು ಕ್ರಿಶ್ಚಿಯನ್ನರನ್ನಾಗಿ ಪರಿವರ್ತಿಸಲಾಗುತ್ತಿತ್ತು’’ ಎಂದು ಆ ಕರುಣಾಮಯಿ ತಾಯಿಯ ಸೇವೆಯನ್ನೇ ಅನುಮಾನಿಸಿದ್ದರು.

ಮುಂದುವರಿದು, ‘‘ಬಾಲಿವುಡ್ ನಟ ಶಾರುಕ್‌ಖಾನ್‌ನನ್ನು ಬೆಂಬಲಿಸಿದ್ದೇ ಈ ದೇಶದ ಬಹುಸಂಖ್ಯಾತರು. ಅವರು ಆತನ ಚಿತ್ರಗಳನ್ನು ನೋಡದೇ ಇದ್ದಿದ್ದರೆ, ಆತ ಇಂದು ಭಾರತದ ಬೀದಿಗಳಲ್ಲಿ ಸಾಮಾನ್ಯ ಮುಸ್ಲಿಮನಂತೆ ಅಡ್ಡಾಡುತ್ತಾ ಕಾಲ ಕಳೆಯುತ್ತಿದ್ದ’’ ಎಂದು ಲೇವಡಿ ಮಾಡುವ ಮೂಲಕ ದೇಶದ ಮುಸ್ಲಿಮರು ಬೀದಿ ಬದಿಯಲ್ಲಿ ಬದುಕಲಿಕ್ಕೆ ಲಾಯಕ್ಕು, ಅವರು ಅಲ್ಲಿಯೇ ಇರಬೇಕು ಎನ್ನುವ ತಮ್ಮ ಇಂಗಿತವನ್ನು ಹೊರಹಾಕಿದ್ದರು.

ಯೋಗಿಯ ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ಆಗುವ ಅನಾಹುತಗಳಿಗಾಗಿಯೇ ಹಿಂದೂ ಪುಂಡರ ತಂಡ ಕಟ್ಟಿದ್ದರು. ಆ ತಂಡ ನೆಲದ ಕಾನೂನನ್ನು ಗಾಳಿಗೆ ತೂರಿ ನಡೆಸಿದ ಅವಾಂತರಗಳು ಒಂದೆರಡಲ್ಲ. ಈ ಖಬರಸ್ತಾನ್, ಲವ್ ಜಿಹಾದ್, ಗೋಹತ್ಯೆ, ಮತಾಂತರದಂತಹ ವಿವಾದಾತ್ಮಕ ಹೇಳಿಕೆಗಳನ್ನು ಪ್ರಚಾರಕ್ಕೆ, ಒಂದು ಕೋಮಿನ ಜನರ ವಿಶ್ವಾಸ ಗಳಿಸಲಿಕ್ಕೆ, ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಲಿಕ್ಕೆ, ಅಧಿಕಾರ ಹಿಡಿಯಲಿಕ್ಕೆ ಬಳಸಿಕೊಂಡಿರಬಹುದು. ಅಧಿಕಾರಕ್ಕೇರಿದ ಮೇಲೂ, 70ಕ್ಕೂ ಹೆಚ್ಚು ಪುಟ್ಟ ಕಂದಮ್ಮಗಳು ಕಣ್ಮುಚ್ಚಿದಾಗಲೂ ‘‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಸಾವುಗಳು ಕಡಿಮೆ’’ ಎನ್ನುವ ವಿತಂಡವಾದವನ್ನು ಮಂಡಿಸುತ್ತಾರೆಂದರೆ- ಓ ದೇವರೆ, ಈ ಯೋಗಿಗೂ ಮಡದಿ, ಮಕ್ಕಳನ್ನು ಆದಷ್ಟು ಬೇಗ ಕರುಣಿಸು ಎಂದು ಬೇಡಿಕೊಳ್ಳಬೇಕೆನಿಸುತ್ತದೆ. ಯಾಕೋ ಈ ಕ್ಷಣದಲ್ಲಿ ಸಿರಿಯಾದ ಮೂರು ವರ್ಷದ ಅಲನ್ ಕುರ್ದಿ ಎಂಬ ಹಾಲುಗಲ್ಲದ ಹಸುಳೆ ಸಮುದ್ರ ತೀರದಲ್ಲಿ ಬೋರಲಾಗಿ ಬಿದ್ದಿದ್ದ ಚಿತ್ರ ನೆನಪಾಗುತ್ತಿದೆ. ಅದು ಜಾಗತಿಕ ಸುದ್ದಿಯಾಗಿತ್ತು. ಮನುಕುಲದ ದುಷ್ಟತನವನ್ನು ತೆರೆದು ತೋರಿಸಿತ್ತು. ಗೋರಖ್‌ಪುರದ ದುರಂತ ಅದಕ್ಕಿಂತಲೂ ದೊಡ್ಡದು. ಯೋಗಿ, ಮೋದಿಗಳ ಮೂಗಿನಡಿಯಲ್ಲಿ ನಡೆದದ್ದು. ಧರ್ಮ, ಸಂಸ್ಕೃತಿ, ದೇಶಭಕ್ತಿಯನ್ನು ಪ್ರತಿಪಾದಿಸುವ ಪಕ್ಷದ ಆಡಳಿತದಲ್ಲಿ ಆದದ್ದು.

ಈ ಮೋದಿ, ಯೋಗಿ ಮತ್ತವರ ಬಿಜೆಪಿಯ ಕನಸು 70 ವರ್ಷ ಆಳಿ ಏನೂ ಮಾಡದ ಕಾಂಗ್ರೆಸನ್ನು ದೇಶದಿಂದ ಮುಕ್ತಗೊಳಿಸುವುದು. ದೇಶದ ಪ್ರಜ್ಞಾವಂತರು ಯೋಚಿಸಬೇಕಾದ ಸಂಗತಿ ಎಂದರೆ, ಇವತ್ತು ಮಕ್ಕಳ ಮಾರಣಹೋಮ ನಡೆದಿರುವ ಗೋರಖ್‌ಪುರ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿರಲಿಲ್ಲ, ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿ ಅಸ್ತಿತ್ವವೇ ಇಲ್ಲ. ಗೋರಖ್‌ಪುರ ಲೋಕಸಭಾ ಕ್ಷೇತ್ರವನ್ನು 1998ರಿಂದ ಇಲ್ಲಿಯವರೆಗೆ, ಸತತವಾಗಿ ಐದು (1998, 1999, 2004, 2009 ಮತ್ತು 2014) ಬಾರಿ ಪ್ರತಿನಿಧಿಸಿದ್ದು- ಇದೇ ಬಿಜೆಪಿ, ಇದೇ ಯೋಗಿ ಆದಿತ್ಯನಾಥ್.

ಮತ್ತೊಂದು ಮುಖ್ಯವಾದ ಸಂಗತಿ ಎಂದರೆ, 2014ರಿಂದ ಈ ದೇಶದಲ್ಲಿರುವುದು ಮೋದಿ ನೇತೃತ್ವದ ಆಡಳಿತ. ಅದಕ್ಕಿಂತಲೂ ಮುಖ್ಯವಾಗಿ, ಗೋರಖ್‌ಪುರವನ್ನು ಒಳಗೊಂಡ ಉತ್ತರ ಪ್ರದೇಶಕ್ಕೆ ಕಳೆದ ಮಾರ್ಚ್‌ನಿಂದ ಇದೇ ಯೋಗಿ ಆದಿತ್ಯನಾಥ್‌ರೇ ಮುಖ್ಯಮಂತ್ರಿ. ಬಿಜೆಪಿ ಕೈಯಲ್ಲಿ ಉತ್ತರ ಪ್ರದೇಶವಿದ್ದೂ, ಕೇಂದ್ರದಲ್ಲಿಯೂ ಅವರದೇ ಸರಕಾರವಿದ್ದೂ, ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆ ಕನಿಷ್ಠ ಸೌಕರ್ಯಗಳನ್ನು ಕಾಣದೆ ಕೂತಿದೆ ಎಂದರೆ; ಆಸ್ಪತ್ರೆಗೆ ಹೋದ ಬಡವರು ಹೆಣವಾಗಿ ಮರುಳುತ್ತಾರೆಂದರೆ; ಬಿಜೆಪಿಯ ಕನಸಿನ ಕಾಂಗ್ರೆಸ್ ಮುಕ್ತ ಭಾರತ ಹೇಗಿರಬಹುದೆಂಬುದನ್ನು ನೀವೆ ಊಹಿಸಿ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News