×
Ad

‘ನನಗೆ ಹಿಂದಿ ಗೊತ್ತಿಲ್ಲ’: ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ಒಡಿಯಾದಲ್ಲಿ ಉತ್ತರಿಸಿದ ಬಿಜೆಡಿ ಸಂಸದ ಸತ್ಪಥಿ

Update: 2017-08-20 18:43 IST

ಹೊಸದಿಲ್ಲಿ,ಆ.20: ಬಿಜು ಜನತಾ ದಳದ ನಾಯಕ ಹಾಗೂ ಸಂಸದ ತಥಾಗತ ಸತ್ಪಥಿ ಅವರು ಕೇಂದ್ರ ಸಚಿವ ನರೇಂದ್ರ ತೋಮರ್ ಅವರು ಹಿಂದಿಯಲ್ಲಿ ಬರೆದಿದ್ದ ಪತ್ರಕ್ಕೆ ಒಡಿಯಾ ಭಾಷೆಯಲ್ಲಿ ಉತ್ತರಿಸುವ ಮೂಲಕ ‘ಹಿಂದಿ ಹೇರಿಕೆ’ ಚರ್ಚೆಗೆ ಮರುಚಾಲನೆ ನೀಡಿದ್ದಾರೆ.

ಶುಕ್ರವಾರ ತೋಮರ್ ಅವರ ಪತ್ರವನ್ನು ಟ್ವೀಟ್ ಮಾಡಿದ್ದ ಸತ್ಪಥಿ, ಕೇಂದ್ರ ಸಚಿವರೇಕೆ ಹಿಂದಿ ಮಾತನಾಡದ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುತ್ತಿದ್ದಾರೆ? ಇದು ಇತರ ಭಾಷೆಗಳ ಮೇಲಿನ ದಾಳಿಯಲ್ಲವೇ ಎಂದು ಪ್ರಶ್ನಿಸಿದ್ದರು.

‘ಭಾರತ 2022’ ನೋಟಕ್ಕೆ ಸಂಬಂಧಿಸಿದ ಜಿಲ್ಲಾಮಟ್ಟದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿ ತೋಮರ್ ಅವರು ಆ.11ರಂದು ಸತ್ಪಥಿಯವರಿಗೆ ಪತ್ರವನ್ನು ಬರೆದಿದ್ದರು.

ತೋಮರ್ ಅವರ ಹಿಂದಿ ಪತ್ರವನ್ನು ಟ್ವೀಟಿಸಿದ ಮರುದಿನ ಸತ್ಪಥಿ ತನ್ನ ಉತ್ತರದ ಫೋಟೊವನ್ನು ಪೋಸ್ಟ್ ಮಾಡಿದ್ದರು. ತೋಮರ್ ಅವರ ಹಿಂದಿ ಪತ್ರವನ್ನು ಅರ್ಥೈಸಿಕೊಳ್ಳಲು ಅಸಾಮರ್ಥ್ಯವನ್ನು ವ್ಯಕ್ತಪಡಿಸಿ ಅವರಿಗೆ ಒಡಿಯಾ ಭಾಷೆಯಲ್ಲಿ ಉತ್ತರಿಸಿದ್ದೇನೆ ಎಂದೂ ಅವರು ಟ್ವೀಟಿಸಿದ್ದರು.

‘‘ನನಗೆ ನಿಮ್ಮ ಹಿಂದಿ ಭಾಷೆ ಅರ್ಥವಾಗುತ್ತಿಲ್ಲ, ಹೀಗಾಗಿ ನಿಮ್ಮ ಪತ್ರ ನನಗೆ ಏನೇನೂ ಅರ್ಥವಾಗಿಲ್ಲ. ನಮ್ಮ ಒಡಿಶಾ ರಾಜ್ಯವು ‘ಸಿ’ ವರ್ಗದಲ್ಲಿ ಬರುತ್ತದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಹೀಗಾಗಿ ದಯವಿಟ್ಟು ನಮಗೆ ಇಂಗ್ಲೀಷ್ ಅಥವಾ ಒಡಿಯಾ ಭಾಷೆಯಲ್ಲಿ ಪತ್ರವನ್ನು ಕಳುಹಿಸಿ’’ ಎಂದು ಸತ್ಪಥಿ ತೋಮರ್‌ಗೆ ಬರೆದ ಉತ್ತರದಲ್ಲಿ ತಿಳಿಸಿದ್ದರು.

ಅಧಿಕೃತ ಭಾಷೆಗಳ ನಿಯಮಗಳಂತೆ ‘ಸಿ’ ವರ್ಗದಲ್ಲಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಅಥವಾ ಅಂತಹ ರಾಜ್ಯದಲ್ಲಿಯ ಕೇಂದ್ರದ್ದಲ್ಲದ ಯಾವುದೇ ಕಚೇರಿ ಅಥವಾ ಯಾವುದೇ ವ್ಯಕ್ತಿಯೊಂದಿಗೆ ಕೇಂದ್ರ ಸರಕಾರವು ನಡೆಸುವ ಪತ್ರ ವ್ಯವ ಹಾರ ಇಂಗ್ಲೀಷ್‌ನಲ್ಲಿರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News