ಅಂತರ್ಜಾಲದ ಅತಿಯಾದ ಬಳಕೆ ಮಾನಸಿಕ ಸಮಸ್ಯೆಗಳಿಗೆ ಆಹ್ವಾನ

Update: 2017-08-21 10:19 GMT

ನೀವು ಇಡೀ ದಿನ ಅಂತರ್ಜಾಲದಲ್ಲಿ ಮುಳುಗಿರುತ್ತೀರಾ? ಹಾಗಿದ್ದರೆ ನಿಮಗೊಂದು ಕೆಟ್ಟ ಸುದ್ದಿಯಿಲ್ಲಿದೆ. ಅಂತರ್ಜಾಲದ ಅತಿಯಾದ ಬಳಕೆಯು ಶರೀರದ ನರವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ತೊಡಕು ಮತ್ತು ಸುದೀರ್ಘಾವಧಿಯಲ್ಲಿ ಮಾನಸಿಕ ವರ್ತನೆಯಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎನ್ನುವುದು ವಿಜ್ಞಾನಿಗಳ ತಂಡವೊಂದು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಮತ್ತು ನರಶಾಸ್ತ್ರಜ್ಞರ ಸಹಭಾಗಿತ್ವದಲ್ಲಿ ನಡೆಸಿದ ಇತ್ತೀಚಿನ ಸಂಶೋಧನೆಯು ಬೆಳಕಿಗೆ ತಂದಿದೆ.ಏಳು ತಿಂಗಳುಗಳ ಕಾಲ ನಡೆಸಲಾದ ಈ ಅಧ್ಯಯನದ ವರದಿಯು ಅಂತರರಾಷ್ಟ್ರೀಯ ಜರ್ನಲ್ ‘ಕರೆಂಟ್ ಸೈಕ್ರಿಯಾಟ್ರಿ ರಿವ್ಯೆಸ್’ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿದೆ.

ಇಂದು ಜನರು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಗ್ರಹಿಕೆಯ ಕಾರ್ಯವನ್ನು ನಿರ್ವಹಿಸಲೆಂದೇ ಇರುವ ಮಿದುಳಿನ ನರಜಾಲವು ಅಂತರ್ಜಾಲದ ಮೂಲಕ ತಿಳಿಯಲ್ಪಡುವ ಮಾಹಿತಿಗಳಿಂದ ಮತ್ತು ಮಿದುಳು ಇವುಗಳಿಗೆ ಪ್ರತಿಕ್ರಿಯಿಸುತ್ತಿರುವುದರಿಂದ ನಿರಂತರ ಒತ್ತಡದಲ್ಲಿರುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಯು ಬಹು ಸುಲಭವಾಗಿ ಹಲವಾರು ನರಸಂಬಂಧಿತ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾನೆ ಎನ್ನುತ್ತಾರೆ ಕ್ಲಿನಿಕಲ್ ನ್ಯೂರೊಬಯಾಲಜಿಸ್ಟ್ ಮತ್ತು ಸಂಶೋಧನಾ ವರದಿಯ ಸಹಲೇಖಕರಾಗಿರುವ ಏಮ್ಸ್‌ನ ಡಾ.ಮುನೀಬ್ ಫೈಕ್.

ಅಂತರ್ಜಾಲದ ಅತಿಯಾದ ಬಳಕೆಯಿಂದಾಗಿ ವ್ಯಕ್ತಿಯು ಅದರ ಗೀಳಿನಲ್ಲಿ ಬೀಳುತ್ತಾನೆ ಮತ್ತು ಒಟ್ಟಾರೆ ಪರಿಣಾಮವು ನರಗಳ ಗ್ರಹಣ ಶಕ್ತಿಯಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ. ಕೆರಳುವಿಕೆ,ತಳಮಳ ಮತ್ತು ಅಂತರ್ಜಾಲಕ್ಕೆ ಅಂಟಿಕೊಂಡಿರಬೇಕೆಂಬ ತುಡಿತ ಇವು ವ್ಯಕ್ತಿಯಲ್ಲಿ ಕಂಡು ಬರುವ ನರ ಸಂಬಂಧಿತ ಮಾನಸಿಕತೆಯಲ್ಲಿ ಏರುಪೇರುಗಳ ಲಕ್ಷಣಗಳಾಗಿವೆ ಎಂದೂ ಅದು ತಿಳಿಸಿದೆ.

ಸಮಸ್ಯೆಯು ಭೌಗೋಳಿಕ ಗಡಿಗಳನ್ನು ಮೀರಿದರೆ ಮತ್ತು ಇದನ್ನು ಕಡೆಗಣಿಸಿದರೆ ಅದು ಮಾನವ ನಾಗರಿಕತೆಯನ್ನು ಕಾಡುವ ರೋಗವಾಗಬಹುದು ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News