50 ರೂ. ಕಡಿಮೆಯಾದದ್ದಕ್ಕೆ ಸ್ಕ್ಯಾನ್ ಮಾಡಲು ಒಪ್ಪದ ಆಸ್ಪತ್ರೆ: ಮಗು ಸಾವು; ಆರೋಪ
ರಾಂಚಿ, ಆ. 21: ಶುಲ್ಕ ಪಾವತಿಸಲು 50 ರೂಪಾಯಿ ಕಡಿಮೆ ಆದ ಹಿನ್ನೆಲೆಯಲ್ಲಿ ಚಿಕಿತ್ಸೆ ದೊರೆಯದೆ 1 ವರ್ಷದ ಮಗುವೊಂದು ಮೃತಪಟ್ಟ ಘಟನೆ ಸೋಮವಾರ ಇಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸಿದೆ. ಸಂತೋಷ್ ಕುಮಾರ್ ಎಂಬವರು ತನ್ನ ಮಗು ಶ್ಯಾಮ್‌ನನ್ನು ಚಿಕಿತ್ಸೆಗಾಗಿ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಶ್ಯಾಮ್ ಮನೆಯ ಟೆರೇಸ್‌ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ. “ವೈದ್ಯರು ಮಗುವಿನ ಸಿಟಿ ಸ್ಕ್ಯಾನ್ ಮಾಡಲು ಹೇಳಿದ್ದರು.
ಸಿಟಿ ಸ್ಕ್ಯಾನ್‌ನ ಶುಲ್ಕ ರೂ. 1,350. ಆದರೆ, ನನ್ನಲ್ಲಿ 1,300 ರೂ. ಮಾತ್ರ ಇತ್ತು. 50 ರೂಪಾಯಿ ಕೊರತೆ ಇದ್ದರೂ ಸಿಟಿ ಸ್ಕಾನ್ ಮಾಡುವಂತೆ ನಾನು ಪ್ರಯೋಗಾಲಯದ ಸಿಬ್ಬಂದಿಯಲ್ಲಿ ವಿನಂತಿಸಿದೆ. ಆದರೆ, ಅವರು ನಿರಾಕರಿಸಿದರು. ಇದರಿಂದ ಪುತ್ರ ಮೃತಪಟ್ಟ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ. ಆದರೆ, ಪ್ರಯೋಗಾಲಯದ ಸಿಬ್ಬಂದಿ ಈ ಆರೋಪ ನಿರಾಕರಿಸಿದ್ದಾರೆ. ಅದಾಗಲೇ ಬಾಲಕ ಮೃತಪಟ್ಟಿದ್ದ ಎಂದು ಅವರು ಹೇಳಿದ್ದಾರೆ. ಆಗಸ್ಟ್ 12ರಂದು ಮಗು ಮನೆಯ ಟೆರೇಸ್‌ನಿಂದ ಕೆಳಗೆ ಬಿದ್ದಿತ್ತು. ಆದರೆ, ಪಾಲಕರು ಮಗುವನ್ನು ಆಗಸ್ಟ್ 20ಕ್ಕೆ ಆಸ್ಪತ್ರೆಗೆ ತಂದರು.
ಮಗುವನ್ನು ಇಲ್ಲಿಗೆ ಕರೆದುಕೊಂಡು ಬರುವ ಮುನ್ನ ಅವರು ಸ್ಥಳೀಯ ವೈದ್ಯರಿಗೆ ತೋರಿಸಿದ್ದರು. ಬೆಳಗ್ಗೆ 7:30ಕ್ಕೆ ಅವರು ಇಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಯ ಆಂತರಿಕ ಘಾಸಿಯಿಂದ 1 ಗಂಟೆ ಬಳಿಕ ಮಗು ಮೃತಪಟ್ಟಿತು. ತುರ್ತು ಸಂದರ್ಭ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ನಾವು ಉಚಿತವಾಗಿ ನೀಡುತ್ತೇವೆ ಎಂದು ಆರ್‌ಐಎಂಎಸ್‌ನ ನಿರ್ದೇಶಕ ಬಿ.ಎಲ್. ಶೆರ್ವಾಲ್ ತಿಳಿಸಿದ್ದಾರೆ.