×
Ad

‘ಗೋರಕ್ಷಕ’ರ ನಿಯಂತ್ರಣ: ಮಹಾರಾಷ್ಟ್ರ ಸರಕಾರಕ್ಕೆ ಸೂಚನೆ ನೀಡಲು ಬಾಂಬೆ ಹೈಕೋರ್ಟ್‌ಗೆ ಮನವಿ

Update: 2017-08-21 21:32 IST

  ಮುಂಬೈ, ಆ.21: ‘ಗೋರಕ್ಷಕರ’ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಈದ್ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ಅನುವು ಮಾಡಿಕೊಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬಾಂದ್ರಾ ಮೂಲದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಶದಾಬ್ ಪಟೇಲ್ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್) ದಾಖಲಿಸಿದ್ದಾರೆ.

 ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿದ್ದ ಹಲ್ಲೆ ಘಟನೆ ಇದೀಗ ಮಹಾರಾಷ್ಟ್ರಕ್ಕೂ ವ್ಯಾಪಿಸಿರುವ ಬಗ್ಗೆ ಕಳವಳ ಸೂಚಿಸಿ ಪಟೇಲ್ ಪಿಐಎಲ್ ಅರ್ಜಿ ದಾಖಲಿಸಿದ್ದಾರೆ. ಕಳೆದ ಸುಮಾರು ಒಂದೂವರೆ ತಿಂಗಳಲ್ಲಿ ಮಾಂಸವನ್ನು ಸಾಗಿಸಲಾಗುವ ವಾಹನಗಳನ್ನು ತಡೆಗಟ್ಟಿ ಹಲ್ಲೆ ನಡೆಸುವ ಹಲವು ಪ್ರಕರಣ ವಾಶಿ, ನಲಸೊಪಾರ ಹಾಗೂ ಅಹ್ಮದ್‌ನಗರಗಳಲ್ಲಿ ವರದಿಯಾಗಿದೆ.

  ಈದ್ ಹಬ್ಬ ಸಮೀಪಿಸುತ್ತಿರುವ ಕಾರಣ ಮಾಂಸ ಸಾಗಾಟ ಮಾಡುವವರಿಗೆ ರಕ್ಷಣೆ ಒದಗಿಸಬೇಕು, ಅಲ್ಲದೆ 247 ಹೆಲ್ಪ್‌ಲೈನ್ ಡೆಸ್ಕ್ ವ್ಯವಸ್ಥೆ ಮಾಡಬೇಕು ಹಾಗೂ ಗೋರಕ್ಷಕರ ಪಟ್ಟಿಯೊಂದನ್ನು ಸಿದ್ದಪಡಿಸಿಟ್ಟುಕೊಳ್ಳಲು ಪೊಲೀಸರಿಗೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಹತ್ಯೆಗಾಗಿ ಜಾನುವಾರು ಖರೀದಿ ಮತ್ತು ಮಾರಾಟವನ್ನು ನಿಷೇಧಿಸುವ ಸರಕಾರದ ಅಧಿಸೂಚನೆಗೆ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ತಡೆಯಾಜ್ಞೆಯ ಬಗ್ಗೆ ಮಹಾರಾಷ್ಟ್ರ ಸರಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

 ತಾನು ಗೋರಕ್ಷಕರನ್ನು ಸಮರ್ಥಿಸುವುದಿಲ್ಲ. ಗೋರಕ್ಷಕರ ವಿರುದ್ಧ ರಾಜ್ಯಸರಕಾರಗಳೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗೋರಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಬೇಕೆಂದು ಪಟೇಲ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬಳಿಕ ತನಗೆ ಜೀವಬೆದರಿಕೆಯ ಕರೆ ಬರುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ಗಳಿಗೆ ಮಾಹಿತಿ ನೀಡಿದ್ದೇನೆ ಎಂದೂ ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News