ಬಿಲ್ ಪಾವತಿಗೆ ಲಂಚ ಕೇಳಿದ ಗೋರಖ್‌ಪುರ ಬಿಆರ್‌ಡಿ ಆಸ್ಪತ್ರೆ ಅಧಿಕಾರಿಗಳು: ಆರೋಪ

Update: 2017-08-21 16:32 GMT

ಲಕ್ನೊ, ಆ.21: ಆಮ್ಲಜನಕ ಪೂರೈಕೆದಾರರಿಗೆ ಆಗಲಿ, ಅಥವಾ ಇನ್ನಿತರ ಸಂಸ್ಥೆಗಳಿಗೆ ಆಗಲಿ, ಬಿಲ್ ಪಾವತಿಸುವ ವಿಷಯದಲ್ಲಿ ಗೋರಖ್‌ಪುರ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮೀನಾಮೇಷ ಎಣಿಸುತ್ತದೆ ಎಂಬ ಆರೋಪಪಟ್ಟಿಗೆ ಇನ್ನೊಂದು ದೂರು ದಾಖಲಾಗಿದೆ.

 2002ರಿಂದ ಬಿಆರ್‌ಡಿ ಕಾಲೇಜಿಗೆ ಆಮ್ಲಜನಕ ಪೂರೈಸುತ್ತಿರುವ ಗೋರಖ್‌ಪುರ ಮೂಲದ ಮೋದಿ ಫಾರ್ಮ ಸಂಸ್ಥೆಯ ಸೇವೆಯನ್ನು ಈ ವರ್ಷದ ಮಾರ್ಚ್‌ನಿಂದ ನಿಲ್ಲಿಸಲಾಗಿದೆ ಹಾಗೂ ಬಾಕಿ ಇರುವ 20 ಲಕ್ಷ ರೂ. ಪಾವತಿಸಲು ಸತಾಯಿಸಲಾಗುತ್ತಿದೆ ಎಂದು ಸಂಸ್ಥೆಯ ಮಾಲಕ ಪ್ರವೀಣ್ ಮೋದಿ ದೂರಿದ್ದಾರೆ.

 ತನ್ನ ಸಂಸ್ಥೆಯ ಸೇವೆ ಅಗತ್ಯವಿಲ್ಲ ಎಂದು ಆಸ್ಪತ್ರೆಯವರು ಸೂಚಿಸಲು ಲಂಚಾವತಾರವೇ ಕಾರಣ . ಟೆಂಡರ್ ಪ್ರಕಟಣೆಯನ್ನೂ ನೀಡದೆ ಇನ್ನೊಂದು ಸಂಸ್ಥೆಗೆ ಆಮ್ಲಜನಕ ಸಿಲಿಂಡರ್ ಪೂರೈಸುವ ಗುತ್ತಿಗೆ ವಹಿಸಲಾಗಿದೆ . ಆ ಸಂಸ್ಥೆ ಲಂಚ ನೀಡಿ ಈ ಗುತ್ತಿಗೆ ಪಡೆಯಲು ಯಶಸ್ವಿಯಾಗಿದೆ ಎಂದವರು ದೂರಿದ್ದಾರೆ.

ಅಷ್ಟೇ ಅಲ್ಲ, ಬಿಲ್ ಪಾವತಿ ಮಾಡಬೇಕಿದ್ದರೆ ಲಂಚ ನೀಡಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು ಹಾಗೂ ಬಿಆರ್‌ಡಿ ಕಾಲೇಜಿನಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಆಗುತ್ತಿರುವ ಅಕ್ರಮದ ಬಗ್ಗೆ ಮಾಹಿತಿ ನೀಡುವುದಾಗಿ ಪ್ರವೀಣ್ ಮೋದಿ ತಿಳಿಸಿದ್ದಾರೆ.

  ಬಿಆರ್‌ಡಿ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಲ್ಬಣಿಸಿದಾಗ ‘ಮೋದಿ ಫಾರ್ಮ’ದ ಸಹಾಯ ಪಡೆಯಲಾಗಿದೆ ಎಂದು ಆಸ್ಪತ್ರೆಯ ಮೆದುಳುಜ್ವರ ವಿಭಾಗದ ಮಾಜಿ ಪ್ರಬಾರ ವೈದ್ಯ ಡಾ ಕಫೀಲ್ ಖಾನ್ ಹೇಳಿದ್ದಾರೆ. ಆದರೆ ಟೆಂಡರ್ ಕರೆಯದೆ ಆಮ್ಲನಜಕ ಪೂರೈಕೆದಾರರಿಗೆ ಗುತ್ತಿಗೆ ವಹಿಸಿಕೊಟ್ಟಿರುವ ಬಗ್ಗೆ ತನಗೆ ಮಾಹಿತಿಯಿಲ್ಲ. ಮೆಡಿಕಲ್ ಕಾಲೇಜು ಪ್ರಾಂಶುಪಾಲರ ಅಧ್ಯಕ್ಷತೆಯ ಸಮಿತಿಯೊಂದು ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತದೆ ಎಂದವರು ಹೇಳಿದ್ದಾರೆ.

ಆಮ್ಲಜನಕ ಪೂರೈಕೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಮ್ಲಜನಕ ಪೂರೈಕೆದಾರರಿಗೆ ಬಾಕಿ ಇರುವ ಮೊತ್ತವನ್ನು ತಕ್ಷಣ ಪಾವತಿಸಲು ಆಸ್ಪತ್ರೆಗೆ ಸೂಚಿಸಲಾಗಿದೆ ಹಾಗೂ ಅಗತ್ಯವಿರುವ ಹಣವನ್ನು ಸರಕಾರ ಬಿಡುಗಡೆಗೊಳಿಸಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮಹಾನಿರ್ದೇಶಕ ಡಾ ಕೆ.ಕೆ.ಗುಪ್ತ ತಿಳಿಸಿದ್ದಾರೆ.

ಆಮ್ಲಜನಕ ಪೂರೈಕೆಯಲ್ಲಿ ಭ್ರಷ್ಟಾಚಾರದ ವಿಷಯವನ್ನು ನಿರ್ಲಕ್ಷ ಮಾಡುವಂತಿಲ್ಲ ಎಂದು ಆಸ್ಪತ್ರೆಯ ವೈದ್ಯರೋರ್ವರು ತಿಳಿಸಿದ್ದಾರೆ. ಕಳೆದ ವರ್ಷ ಆಸ್ಪತ್ರೆಗೆ ಸಾಮಾಗ್ರಿಗಳನ್ನು ಖರೀದಿಸಿದ ಬಿಲ್‌ಗಳನ್ನು ಕೂಡಾ ಪಾವತಿಸಿಲ್ಲ. ವಾರ್ಡ್‌ಗಳ, ತುರ್ತು ಚಿಕಿತ್ಸಾ ವಿಭಾಗದ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಲು ಕೂಡಾ ಲಂಚಾವತಾರವೇ ಕಾರಣವಾಗಿದೆ ಎಂದವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News