ಸಿದ್ಧ ಕೋಳಿ ಮಾಂಸ ತಿನ್ನುತ್ತೀರೇ ? ಹಾಗಾದರೆ ಅಪಾಯ ಕಟ್ಟಿಟ್ಟ ಬುತ್ತಿ !

Update: 2017-08-21 17:07 GMT

ಹೊಸದಿಲ್ಲಿ, ಆ. 21: ಸೂಪರ್ ಮಾರ್ಕೆಟ್‌ನಿಂದ ತರುವ ಸಿದ್ಧ ಕೋಳಿ ಮಾಂಸ ಅಪಾಯಕಾರಿ ಆಹಾರ ರೋಗಕಾರಕ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುತ್ತದೆ. ಆದರೆ, ಹೆಪ್ಪುಗಟ್ಟಿಸಲಾದ ಕೋಳಿ ಮಾಂಸ ಸುರಕ್ಷಿತ ಎಂದು ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್‌ನ ಅಧ್ಯಯನ ಬಹಿರಂಗಗೊಳಿಸಿದೆ.

  ಕೋಳಿ ಸಾಕಣೆಯಲ್ಲಿ ವಿವೇಚನಾ ರಹಿತವಾಗಿ ಔಷಧ ಬಳಸುತ್ತಿರುವು ದರಿಂದ ಕೋಳಿ ಮಾಂಸದಲ್ಲಿ ಪ್ರತಿಜೀವಕವನ್ನು ಪ್ರತಿರೋಧಿಸುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ 5 ವಂಶಗಳಲ್ಲಿ 4 ಕಂಡು ಬರುತ್ತದೆ ಎಂದು ಅಧ್ಯಯನ ಹೇಳಿದೆ.

 ಐದು ಸದಸ್ಯರ ತಂಡ ಅಧ್ಯಯನಕ್ಕಾಗಿ ಮುಂಬೈಯ ಸೂಪರ್ ಮಾರ್ಕೆಟ್ ಹಾಗೂ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳಿಂದ ಕೋಳಿ ಮಾಂಸದ 87 ಮಾದರಿಗಳನ್ನು ಸಂಗ್ರಹಿಸಿತ್ತು. 8ರಿಂದ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂರಕ್ಷಿಸಲಾದ ಕೋಳಿ ಮಾಂಸದ 48 ಮಾದರಿಗಳಲ್ಲಿ ಶೇ. 50ರಷ್ಟು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಂಡು ಬಂದಿದೆ. ಕನಿಷ್ಠ ಸಂಸ್ಕರಿಸಿದ ಹಾಗೂ ಕಚ್ಛಾ ಕೋಳಿ ಮಾಂಸದ 34 ಮಾದರಿಗಳಲ್ಲಿ ಶೇ. 53ರಷ್ಟು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಆದರೆ, ಹೆಪ್ಪುಗಟ್ಟಿಸಿದ ಕೋಳಿ ಮಾಂಸದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಂಡು ಬಂದಿಲ್ಲ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಆಹಾರದಿಂದ ಉತ್ಪತ್ತಿಯಾಗುವ ಒಂದು ಅಪಾಯಕಾರಿ ರೋಗಕಾರಕ ಎಂದು ಪರಿಗಣಿಸಲಾಗುತ್ತದೆ. ಇದು ಅತಿಸಾರ, ಹೊಟ್ಟೆ ನೋವು, ವಾಂತಿ, ಅಸ್ವಸ್ಥತೆ ಹಾಗೂ ಜ್ವರಕ್ಕೆ ಕಾರಣವಾಗುತ್ತದೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಪ್ರಕೃತಿಯಲ್ಲಿ ಕಂಡು ಬರುತ್ತದೆ. ಸೋಂಕಿತ ಆಹಾರ ನಿರ್ವಹಣೆಗಾರರು ಕೈತೊಳೆಯದೆ ಆಹಾರ ಸಂಸ್ಕರಣೆ ಹಾಗೂ ಆಹಾರ ನಿರ್ವಹಣೆಯಲ್ಲಿ ತೊಡಗಿದಾಗ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಹರಡುತ್ತದೆ ಎಂದು ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News