ದೇವೇಂದ್ರ ಜಜಾರಿಯಾ, ಸರ್ದಾರ್ ಸಿಂಗ್‌ಗೆ ‘ಖೇಲ್‌ರತ್ನ'

Update: 2017-08-22 12:47 GMT

ಹೊಸದಿಲ್ಲಿ, ಆ.22: ಆಯ್ಕೆ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕ್ರೀಡಾ ಸಚಿವಾಲಯ ಮಂಗಳವಾರ ಈ ವರ್ಷದ ಕ್ರೀಡಾಪ್ರಶಸ್ತಿಗಳನ್ನು ಘೋಷಿಸಿದ್ದು, ಪ್ಯಾರಾ ಅಥ್ಲೀಟ್ ದೇವೇಂದ್ರ ಜಜಾರಿಯಾ ಹಾಗೂ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್‌ಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.

ಏಳು ಕೋಚ್‌ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಕ್ರಿಕೆಟಿಗರ ಚೇತೇಶ್ವರ ಪೂಜಾರ, ಹರ್ಮನ್‌ಪ್ರೀತ್ ಕೌರ್, ಟೆನಿಸ್ ಆಟಗಾರ ಸಾಕೇತ್ ಮೈನೇನಿ ಹಾಗೂ ಕನ್ನಡಿಗ ಹಾಕಿಪಟು ಎಸ್‌ವಿ ಸುನೀಲ್ ಸಹಿತ 17 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಹಾಗೂ ಮೂವರಿಗೆ ಧ್ಯಾನ್‌ಚಂದ್ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ.
ಪ್ಯಾರಾ ಅಥ್ಲೀಟ್‌ಗಳಾದ ಮರಿಯಪ್ಪನ್ ಹಾಗೂ ವರುಣ್ ಸಿಂಗ್ ಬಾಟಿ, ಅಥ್ಲೀಟ್‌ಗಳಾದ ಖುಶ್ಬೀರ್ ಕೌರ್ ಹಾಗೂ ರಾಜೀವ್ ಅರೋಕಿಯಾಗೆ ಅರ್ಜುನ ಪ್ರಶಸ್ತಿ ಲಭಿಸಿದೆ.

ಕಳೆದ ವರ್ಷ ಮೊತ್ತ ಮೊದಲ ಬಾರಿಗೆ ನಾಲ್ವರು ಕ್ರೀಡಾಪಟುಗಳಾದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಜಿತು ರಾಯ್‌ಗೆ ಖೇಲ್‌ರತ್ನ ಪ್ರಶಸ್ತಿ ನೀಡಲಾಗಿತ್ತು.

 ಜಾವೆಲಿನ್ ಎಸೆತಗಾರ ಜಜಾರಿಯಾ ಭಾರತದ ಉನ್ನತ ಕ್ರೀಡಾ ಗೌರವ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾದ ಮೊದಲ ಪ್ಯಾರಾಅಥ್ಲೀಟ್ ಆಗಿದ್ದಾರೆ. ಜಸ್ಟಿಸ್ ಸಿ.ಕೆ.ಠಾಕೂರ್ ನೇತೃತ್ವದ ಆಯ್ಕೆ ಸಮಿತಿ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಎರಡುಬಾರಿ ಚಿನ್ನದ ಪದಕ ಜಯಿಸಿದ್ದ ಜಜಾರಿಯಾರನ್ನು ಖೇಲ್‌ರತ್ನ ಪ್ರಶಸ್ತಿಗೆ ಮೊದಲ ಆಯ್ಕೆಯಾಗಿ ಪರಿಗಣಿಸಿತ್ತು. 31ರ ಹರೆಯದ ಸರ್ದಾರ್ ಸಿಂಗ್ ಖೇಲ್‌ರತ್ನಕ್ಕೆ ಎರಡನೆ ಆಯ್ಕೆಯಾಗಿದ್ದರು. ಇದೀಗ ಇಬ್ಬರಿಗೂ ಜಂಟಿಯಾಗಿ ಖೇಲ್‌ರತ್ನ ಪ್ರಶಸ್ತಿ ಪ್ರದಾನಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News