ಶಾಲೆಗೆ ಮಾಹಿತಿ ನೀಡುವಾಗ ವಿಳಂಬವಾಗಿಲ್ಲ: ಕೇರಳ ಸರಕಾರ

Update: 2017-08-22 12:39 GMT

ತಿರುವನಂತಪುರಂ, ಆ.22: ರಾಷ್ಟ್ರ ಧ್ವಜಾರೋಹಣದ ಕುರಿತ ಮಾರ್ಗದರ್ಶಿ ಸೂತ್ರದ ಬಗ್ಗೆ ಪಾಲಕ್ಕಾಡ್ ಶಾಲೆಗೆ ಸಕಾಲದಲ್ಲಿ ಮಾಹಿತಿ ನೀಡಲಾಗಿತ್ತು ಎಂದು ಕೇರಳ ಸರಕಾರ ತಿಳಿಸಿದೆ. ಈ ಶಾಲೆಯಲ್ಲಿ ಸ್ವಾತಂತ್ರೋತ್ಸವದ ದಿನದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರಾಷ್ಟ್ರಧ್ವಜಾರೋಹಣ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಒ.ರಾಜಗೋಪಾಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯದ ಶಿಕ್ಷಣ ಸಚಿವ ಸಿ.ರವೀಂದ್ರನಾಥ್, ಸ್ವಾತಂತ್ರ ದಿನಾಚರಣೆ ಆಚರಿಸುವ ಬಗ್ಗೆ ಶಿಕ್ಷಣ ಇಲಾಖೆಯ ನಿರ್ದೇಶಕರು ಮಾರ್ಗದರ್ಶಿ ಸೂತ್ರದ ಸಹಿತ ಸುತ್ತೋಲೆಯನ್ನು ಆಗಸ್ಟ್ 8 ಹಾಗೂ 10ರಂದು ಕಳಿಸಿದ್ದರು ಎಂದು ತಿಳಿಸಿದರು. ಸುತ್ತೋಲೆಯ ಪ್ರಕಾರ, ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರು ರಾಷ್ಟ್ರಧ್ವಜಾರೋಹಣ ಮಾಡಬೇಕು ಹಾಗೂ ವಿದ್ಯಾರ್ಥಿಗಳ ಪೋಷಕರು, ಜನಪ್ರತಿನಿಧಿಗಳು, ಸರಕಾರಿ ಉದ್ಯೋಗಿಗಳು ಹಾಗೂ ಸ್ವಾತಂತ್ರ ಹೋರಾಟಗಾರರು ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಸ್ವಾತಂತ್ರೋತ್ಸವದಂದು ಭಾಗವತ್ ಧ್ವಜಾರೋಹಣ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣ ಜಿಲ್ಲಾಧಿಕಾರಿ ಹಾಗೂ ಪಾಲಕ್ಕಾಡ್ ಶಿಕ್ಷಣ ವಿಭಾಗದ ಉಪನಿರ್ದೇಶಕರು ಪಾಲಕ್ಕಾಡ್‌ನ ಕರ್ಣಗಿ ಅಮ್ಮನ್ ಹೈಯರ್ ಸೆಕೆಂಡರಿ ಶಾಲೆಗೆ ಸೂಚನೆ ನೀಡಿ, ನಿರ್ದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ್ದರು. ಶಿಕ್ಷಣ ಇಲಾಖೆ ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದೆ ಎಂದು ರವೀಂದ್ರನಾಥ್ ಹೇಳಿದರು.

ಪಾಲಕ್ಕಾಡ್‌ನ ಕರ್ಣಗಿ ಅಮ್ಮನ್ ಶಾಲೆ ಸರಕಾರಿ ಅನುದಾನಿತ ಸಂಸ್ಥೆಯಾಗಿರುವ ಕಾರಣ , ಶಾಲೆಯ ಮುಖ್ಯಸ್ಥರು ಅಥವಾ ಚುನಾಯಿತ ಪ್ರತಿನಿಧಿಗಳು ಮಾತ್ರ ಧ್ವಜಾರೋಹಣ ಮಾಡಬೇಕು ಎಂದು ಪಾಲಕ್ಕಾಡ್ ಜಿಲ್ಲಾಧಿಕಾರಿ ಆಗಸ್ಟ್ 14ರಂದು ಸ್ಪಷ್ಟವಾಗಿ ತಿಳಿಸಿದ್ದರು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News