ಎಐಎಡಿಎಂಕೆ ವಿಲೀನ ಶಶಿಕಲಾಗೆ ಬಗೆದ ದ್ರೋಹ: ದಿನಕರನ್

Update: 2017-08-22 16:03 GMT

ಚೆನ್ನೈ, ಆ.22: ಎಐಎಡಿಎಂಕೆ ಉಭಯ ಬಣದ ವಿಲೀನವು ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ ಬಗೆದಿರುವ ದ್ರೋಹವಾಗಿದೆ ಎಂದು ಮೂಲೆಗುಂಪಾಗಿರುವ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹೇಳಿದ್ದಾರೆ.

ಮುಖ್ಯಮಂತ್ರಿ ಪಳನಿಸಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಬಣಗಳು ಹಠಾತ್ತಾಗಿ ವಿಲೀನಗೊಂಡಿರುವ ಪ್ರಕ್ರಿಯೆಯ ಬಗ್ಗೆ ಕೊನೆಗೂ ವೌನ ಮುರಿದಿರುವ ದಿನಕರನ್, ಸೋಮವಾರ ರಾತ್ರಿ ಸರಣಿ ಟ್ವೀಟ್ ಮೂಲಕ ತನ್ನ ಅಸಮಾಧಾನ ಹೊರ ಹಾಕಿದ್ದು, ಹೊಸ ವ್ಯವಸ್ಥೆ ಎಷ್ಟು ಸಮಯ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.

   ಇದು ವಿಲೀನವಲ್ಲ. ಇದೊಂದು ವಾಣಿಜ್ಯ ಒಪ್ಪಂದವಾಗಿದೆ. ಸ್ವಹಿತಾಸಕ್ತಿಯ ರಕ್ಷಣೆ, ಅಧಿಕಾರದ ಹಸಿವು ಹಾಗೂ ಅಧಿಕಾರ ಉಳಿಸಿಕೊಳ್ಳಲು ನಡೆಸಿದ ವಾಣಿಜ್ಯ ಒಪ್ಪಂದ ಎಂದು ದಿನಕರನ್ ಟೀಕಿಸಿದ್ದಾರೆ. ತನ್ನ ರಾಜಕೀಯ ಯಾತ್ರೆ ಮುಂದುವರಿಯಲಿದೆ ಎಂದಿರುವ ದಿನಕರನ್, ತಡೆಹಿಡಿಯಲ್ಪಟ್ಟಿರುವ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆಗೂ ಮುನ್ನ ಅಧಿಕೃತ ಚಿಹ್ನೆಯಾದ ‘ಎರಡೆಲೆ’ಯನ್ನು ಮರಳಿ ಪಡೆಯಲು ಹಾಗೂ ಪಕ್ಷವನ್ನು ರಕ್ಷಿಸಲು ಪಣತೊಟ್ಟಿರುವುದಾಗಿ ಹೇಳಿದರು. ಗಂಟಲು ನೋವಿನ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದು ಬುಧವಾರ ಮಾಧ್ಯಮದವರನ್ನು ಭೇಟಿಯಾಗುವುದಾಗಿ ಅವರು ತಿಳಿಸಿದರು.

ಈ ವಿಲೀನ ಎಷ್ಟು ಸಮಯ ಬಾಳುತ್ತದೆ ಎಂಬುದು ದೇವರಿಗೇ ಗೊತ್ತು. 1989ರಲ್ಲಿ ಕಾರ್ಯಕರ್ತರ ಆಶಯಕ್ಕೆ ಮನ್ನಣೆ ನೀಡಿ ಅಮ್ಮ(ದಿವಂಗತ ಮುಖ್ಯಮಂತ್ರಿ ಜಯಲಲಿತಾ)ರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಸ್ವೀಕರಿಸಲಾಯಿತು ಹಾಗೂ ಅವರ ನಾಯಕತ್ವದಡಿ ಎಲ್ಲರೂ ಒಂದಾದರು ಎಂದು ದಿನಕರನ್, ಆದರೆ ಈಗ ತಾವೇ ಒಪ್ಪಿ ಆಯ್ಕೆಮಾಡಿರುವ ಪ್ರಧಾನ ಕಾರ್ಯದರ್ಶಿ(ಶಶಿಕಲಾ)ಯನ್ನು ಉಚ್ಛಾಟಿಸುವ ಘೋಷಣೆಯೊಂದಿಗೆ ನಡೆದಿರುವ ವಿಲೀನ ಪ್ರಕ್ರಿಯೆಯನ್ನು ಕಾರ್ಯಕರ್ತರು ಒಪ್ಪಲಾರರು . ಇದು ವಿಶ್ವಾಸದ್ರೋಹವಾಗಿದೆ ಎಂದರು. ಎಐಎಡಿಂಕೆ ಚಿಹ್ನೆ ಸ್ಥಂಭನಗೊಳ್ಳಲು ಪನ್ನೀರ್‌ಸೆಲ್ವಂ ಕಾರಣ. ಅವರನ್ನು ಕಾರ್ಯಕರ್ತರು ಒಪ್ಪಿಕೊಳ್ಳಲಾರರು ಎಂದ ದಿನಕರನ್, ನಿನ್ನೆಯವರೆಗೂ ಪಳನಿಸಾಮಿ ಆಡಳಿತವನ್ನು ಭ್ರಷ್ಟಾಚಾರದ ಕೂಪ ಎಂದು ಬಣ್ಣಿಸಿದ್ದ ಪನ್ನೀರ್‌ಸೆಲ್ವಂ, ಈಗ ಅದು ಹೇಗೆ ಅದೇ ಆಡಳಿತದ ಭಾಗವಾಗಿರುತ್ತಾರೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News