ಯುಎಸ್ ಓಪನ್‌ನಿಂದ ಹಿಂದೆ ಸರಿದ ಅಝರೆಂಕಾ

Update: 2017-08-22 18:44 GMT

ನ್ಯೂಯಾರ್ಕ್, ಆ.22: ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವಿಕ್ಟೋರಿಯ ಅಝರೆಂಕಾ ಕೌಟುಂಬಿಕ ಕಾರಣದಿಂದ ಮುಂಬರುವ ಯುಎಸ್ ಓಪನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

  ಬೆಲಾರಸ್‌ನ 28ರ ಹರೆಯದ ಆಟಗಾರ್ತಿ ಅಝರೆಂಕಾ ಡಿಸೆಂಬರ್‌ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಜೂನ್‌ನಲ್ಲಿ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು. ನವಜಾತ ಶಿಶುವಿನ ತಂದೆಯಿಂದ ದೂರವಾಗಲು ನಿರ್ಧರಿಸಿರುವ ಅಝರೆಂಕಾ ನ್ಯಾಯಾಲಯದ ವಿಚಾರಣೆಯ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ಗೆ ತನ್ನ ಪುತ್ರನನ್ನು ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ಕಳೆದ ವಾರ ಟ್ವೀಟ್ ಮಾಡಿದ್ದರು. ‘‘ಕೌಟುಂಬಿಕ ಕಾರಣದಿಂದಾಗಿ ಈ ವರ್ಷದ ಯುಎಸ್ ಓಪನ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಇರುವುದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ’’ ಎಂದು ಅಝರೆಂಕಾ ಹೇಳಿದ್ದಾರೆ. ‘‘ವಿಂಬಲ್ಡನ್ ಕೊನೆಗೊಂಡ ಬಳಿಕ ಪತಿಯಿಂದ ಬೇರ್ಪಡಲಿದ್ದೇನೆ. ನಮ್ಮಿಬ್ಬರ ನಡುವೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ನನ್ನ ಪುತ್ರನನ್ನು ಕ್ಯಾಲಿಫೋರ್ನಿಯದಲ್ಲಿ ಬಿಟ್ಟುಬಂದರೆ ಮಾತ್ರ ಯುಎಸ್ ಓಪನ್‌ನಲ್ಲಿ ಆಡಲು ಸಾಧ್ಯ.ಆದರೆ ನನಗೆ ಆ ರೀತಿ ಮಾಡಲು ಇಷ್ಟವಿಲ್ಲ’’ ಎಂದು ಅಝರೆಂಕಾ ಕಳೆದ ವಾರ ಟ್ವೀಟ್ ಮಾಡಿದ್ದರು. ಅಝರೆಂಕಾ ವಿಂಬಲ್ಡನ್ ಟೂರ್ನಿಯಲ್ಲಿ ಆಡಿದ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ. ಪ್ರಸ್ತುತ 204ನೆ ರ್ಯಾಂಕಿನಲ್ಲಿರುವ ಅಝರೆಂಕಾ 2012 ಹಾಗೂ 2013ರ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಎರಡು ಬಾರಿಯೂ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋತಿದ್ದರು. 2012 ಹಾಗೂ 2013ರಲ್ಲಿ ಆಸ್ಟ್ರೇಲಿಯದಲ್ಲಿ ಎರಡು ಗ್ರಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News