ಕರ್ನಾಟಕದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ
ಕೃಷ್ಣಪ್ಪ ಗೌತಮ್ | Photo Credit : PTI
ಬೆಂಗಳೂರು, ಡಿ.22: ಕರ್ನಾಟಕದ ಆಲ್‌ರೌಂಡರ್ ಹಾಗೂ ಮಾಜಿ ಐಪಿಎಲ್ ಸ್ಟಾರ್ ಕೃಷ್ಣಪ್ಪ ಗೌತಮ್ ಸೋಮವಾರ ತನ್ನ 37ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಗಳ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
ಕರ್ನಾಟಕ ತಂಡದ ಹಲವು ಪಂದ್ಯಗಳ ಗೆಲುವಿನ ರೂವಾರಿಯಾಗಿದ್ದ ಗೌತಮ್ 14 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್‌ಗೆ ಖ್ಯಾತಿ ಪಡೆದಿದ್ದರು. ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಿದ್ದರು.
ಗೌತಮ್ ಅವರು ಕರ್ನಾಟಕದ ಪರ 59 ಪ್ರಥಮ ದರ್ಜೆ ಹಾಗೂ 68 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು. ಫೆಬ್ರವರಿ 2023ರಲ್ಲಿ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು.
ಕರ್ನಾಟಕದ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 394 ವಿಕೆಟ್‌ಗಳು ಹಾಗೂ 2,783 ರನ್ ಗಳಿಸಿದ್ದು, ಇದರಲ್ಲಿ ರಣಜಿಯಲ್ಲಿ ಗಳಿಸಿದ ಒಂದು ಶತಕ ಹಾಗೂ ಐದು ಅರ್ಧಶತಕಗಳಿವೆ.
ಗೌತಮ್ 2012ರಲ್ಲಿ ರಣಜಿ ಟ್ರೋಫಿ ಋತುವಿನಲ್ಲಿ ಉತ್ತರ ಪ್ರದೇಶ ವಿರುದ್ಧ ತನ್ನ ಚೊಚ್ಚಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ತನ್ನ ಮೊದಲ ಪಂದ್ಯದಲ್ಲಿ ಸುರೇಶ್ ರೈನಾ ಹಾಗೂ ಭುವನೇಶ್ವರ ಕುಮಾರ್ ಅವರಂತಹ ಪ್ರಮುಖ ಆಟಗಾರರ ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.
2016-17 ರ ರಣಜಿ ಋತು ಗೌತಮ್ ವೃತ್ತಿಜೀವನದ ಮಹತ್ವದ ಸಾಧನೆಗೆ ಸಾಕ್ಷಿಯಾಗಿತ್ತು. ಆಗ ಅವರು ಕೇವಲ 8 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದರು. ನೈಜ ಆಲ್‌ರೌಂಡರ್ ಎಂದು ಸ್ವತಃ ಸಾಬೀತುಪಡಿಸಿದ್ದರು. ಆ ನಂತರದ ವರ್ಷ ಮೈಸೂರಿನಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ತನ್ನ ಚೊಚ್ಚಲ ಪ್ರಥಮ ದರ್ಜೆ ಶತಕವನ್ನು ಸಿಡಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ಗೌತಮ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ನಿರ್ಮಿಸಿದ್ದಾರೆ. ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 320ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿ ತನ್ನ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.
ಬ್ಯಾಟಿಂಗ್‌ನಲ್ಲಿ ಕೆಲವು ಉಪಯುಕ್ತ ಇನಿಂಗ್ಸ್‌ಗಳನ್ನು ಆಡಿದ್ದಾರೆ. 2023ರ ತನಕ ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಸದಸ್ಯರಾಗಿದ್ದರು. 2019ರಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ತಂಡದ ವಿರುದ್ಧ ಎಂಟು ವಿಕೆಟ್ ಗೊಂಚಲು ಕಬಳಿಸಿದ್ದರು. ಆ ಪಂದ್ಯದಲ್ಲಿ ಕರ್ನಾಟಕ ತಂಡ 26 ರನ್‌ನಿಂದ ಜಯ ಸಾಧಿಸಿತ್ತು.
2019-20ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 1 ರನ್‌ನಿಂದ ರೋಚಕ ಗೆಲುವು ದಾಖಲಿಸಲು ಪ್ರಮುಖ ಪಾತ್ರವಹಿಸಿದ್ದರು.
ತನ್ನ ಸ್ಥಿರ ಪ್ರದರ್ಶನದ ಮೂಲಕ ಹಲವು ಬಾರಿ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದರು. ನ್ಯೂಝಿಲ್ಯಾಂಡ್ ‘ಎ’, ವೆಸ್ಟ್‌ಇಂಡೀಸ್ ‘ಎ’, ಆಸ್ಟ್ರೇಲಿಯ ‘ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡಗಳ ವಿರುದ್ಧ ಆಡಿದ್ದರು.
2021ರಲ್ಲಿ ಶ್ರೀಲಂಕಾ ಕ್ರಿಕೆಟ್ ಪ್ರವಾಸಕ್ಕೆ ಸೀನಿಯರ್ ಭಾರತೀಯ ತಂಡಕ್ಕೆ ಕರೆ ಪಡೆದಿದ್ದರು. ಕೊಲಂಬೊದಲ್ಲಿ ಏಕೈಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಗೌತಮ್ ಒಂದು ವಿಕೆಟನ್ನು ಪಡೆದಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟಿ-20 ಪಂದ್ಯಾವಳಿಯಲ್ಲಿ ಗೌತಮ್ ಅವರು ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ತಂಡಗಳ ಪರ ಆಡಿದ್ದರು. ಒಟ್ಟು 36 ಪಂದ್ಯಗಳಲ್ಲಿ 8.24ರ ಇಕಾನಮಿ ರೇಟ್‌ನಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದರು.
2021ರಲ್ಲಿ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 9.25 ಕೋ.ರೂ.ಗೆ ಹರಾಜಾಗಿದ್ದರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಹೊಸ ಆಟಗಾರನಾಗಿದ್ದರು. 2018ರಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 6.2 ಕೋ.ರೂ.ಗೆ ಹರಾಜಾಗಿದ್ದರು. ತನ್ನ ಐಪಿಎಲ್ ವೃತ್ತಿಜೀವನದಲ್ಲಿ 35 ಕೋ.ರೂ.ಗೂ ಅಧಿಕ ಆದಾಯ ಗಳಿಸಿರುವ ಗೌತಮ್ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದರು.
2019ರ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ಸ್ಮರಣೀಯ ಪ್ರದರ್ಶನ ನೀಡಿದ್ದರು. ಬಳ್ಳಾರಿ ಟಸ್ಕರ್ಸ್ ಪರ ಆಡಿದ್ದ ಗೌತಮ್ ಕೇವಲ 56 ಎಸೆತಗಳಲ್ಲಿ 13 ಸಿಕ್ಸರ್‌ಗಳ ಸಹಿತ 134 ರನ್ ಗಳಿಸಿದ್ದರು.
ಆನಂತರ ಬೌಲಿಂಗ್‌ನಲ್ಲಿ ಅಮೋಘ ಸ್ಪೆಲ್ ಎಸೆದಿದ್ದ ಗೌತಮ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 8 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂದು ಭಾರತೀಯ ಟಿ-20 ಕ್ರಿಕೆಟ್‌ನಲ್ಲಿ ಒಂದು ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನವಾಗಿ ಉಳಿದುಕೊಂಡಿದೆ.
ಗೌತಮ್ ನಿವೃತ್ತಿಯ ಮೂಲಕ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಓರ್ವ ಪ್ರಭಾವಶಾಲಿ ಆಲ್‌ರೌಂಡರ್ ನೇಪಥ್ಯಕ್ಕೆ ಸರಿದಂತಾಗಿದೆ.
ಮೈಸೂರು ವಾರಿಯರ್ಸ್ ತಂಡದಲ್ಲಿ ಮೆಂಟರ್ ಆಗಿರುವ ಗೌತಮ್ 2025ರ ಆವೃತ್ತಿಯ ಮಹಾರಾಜ ಟಿ20 ಟೂರ್ನಿಯಲ್ಲಿ ಆಡಿದ್ದರು. ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡುತ್ತಿದ್ದಾರೆ.
‘‘ಬೇರೆ ರಾಜ್ಯಕ್ಕೆ ಹೋಗುವ ಆಯ್ಕೆ ನನ್ನ ಬಳಿ ಇದ್ದರೂ ನಾನು ಅದನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಿಲ್ಲ. ನಾನು ಹೆಮ್ಮೆಯ ಕರ್ನಾಟಕದ ಕ್ರಿಕೆಟಿಗನಾಗಿ ನನ್ನ ಪ್ರಯಾಣವನ್ನು ಆರಂಭಿಸಿದ್ದೆ. ಬೇರೆ ರಾಜ್ಯಕ್ಕಾಗಿ ಆಡುವ ಬಗ್ಗೆ ನಾನು ಎಂದಿಗೂ ಯೋಚಿಸಲಿಲ್ಲ’’ ಎಂದು ಗೌತಮ್ ಸೋಮವಾರ ಹೇಳಿದ್ದಾರೆ.