ನನ್ನ ಮಕ್ಕಳ ಬಾಲ್ಯ ಸ್ನೇಹಿತರು

Update: 2017-08-22 18:58 GMT

ಇದೀಗ ಅಪ್ಪ ಮಗಳು ನನಗಿಂತ ಮೊದಲು ಮಂಗಳೂರಿಗೆ ಶಾಲೆಗೆ ಹೊರಡುತ್ತಿದ್ದರು. ಬೆಳಗ್ಗಿನ ತಿಂಡಿ ಮುಗಿಸಿ ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದರು. ಕನ್ನಡ ಮಾಧ್ಯಮದ ಶಾಲೆಯಾದುದರಿಂದ ನನ್ನ ಚುರುಕಾದ ಮಗಳಿಗೆ ಓದು ಬರಹಗಳು ಕಷ್ಟವಾಗಿರಲಿಲ್ಲ. ದಿನಾ ಸಂಜೆ ಹೆಚ್ಚಾಗಿ ಮಗಳನ್ನು ಕರೆತರಲು ಸೈಂಟ್ ಆ್ಯನ್ಸ್ ಶಾಲೆಗೆ ಹೋಗುತ್ತಿದ್ದೆ. ಸ್ವಾಗತ್ ಹೋಟೆಲ್‌ಗೆ ಹೋಗಿ ಮಗಳಿಗೆ ಕಾಫಿ, ತಿಂಡಿ ತಿನ್ನಿಸಿ ಕರೆದು ತರುತ್ತಿದ್ದೆ. ನಾು ಆ ಸಂಜೆಯ ದಿನಗಳಲ್ಲಿ ಹೆಚ್ಚಾಗಿ 45ಸಿ ಮೋಹನ್ ಬಸ್ಸಿನಲ್ಲಿಯೇ ಹೋಗುತ್ತಿದ್ದೆವು. ನಂದಾವರರು ಬೇರೆ ಬೇರೆ ಸಾಹಿತ್ಯಿಕ ಕಾರಣಗಳಿಂದ ಬರುವುದು ತಡವಾಗುತ್ತಿತ್ತು. ದಿನಾ ಅದೇ ಬಸ್ಸಿನಲ್ಲಿ ಬರುತ್ತಿದ್ದುದರಿಂದ ಆ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್‌ಗಳು ಚೆನ್ನಾಗಿ ಪರಿಚಿತರಲ್ಲದೆ ಆತ್ಮೀಯರೂ ಆಗಿದ್ದರು. ಆದುದರಿಂದ ಹೆಚ್ಚಾಗಿ ಡ್ರೈವರ್ ಪಕ್ಕದಲ್ಲಿರುವ ಅಡ್ಡ ಸೀಟುಗಳಲ್ಲಿ ಕುಳಿತುಕೊಳ್ಳುವುದು ಮಗಳಿಗೆ ಇಷ್ಟವಾಗುತ್ತಿತ್ತು.

ರಸ್ತೆಯುದ್ದಕ್ಕೂ ಹೊರ ಪ್ರಪಂಚವನ್ನು ನೋಡುತ್ತಲೇ ಬರುವ ಮಗಳು ದಾರಿಯಲ್ಲಿ ಮಂಗಳೂರು ಪೇಟೆಯಿಂದ ಕುಳೂರಿನ ದಾರಿಯವರೆಗೆ ಇದ್ದ ಅಂಗಡಿಗಳ ಹೆಸರನ್ನು ಓದಿಕೊಂಡು ಬರುತ್ತಿದ್ದಳು. ಆಕೆ ಅಕ್ಷರಗಳನ್ನು ಓದುವ ಮೂಲಕವೇ ಪರಿಚಯಿಸಿಕೊಂಡಿದ್ದಳು. ನಮ್ಮ ಮನೆಗೆ ಬರುತ್ತಿದ್ದ ಪತ್ರಿಕೆಗಳ ಹೆಸರನ್ನು ಆ ಮೂಲಕ ಅವುಗಳ ಅಕ್ಷರಗಳನ್ನು ಓದುತ್ತಿದ್ದಳು. ಬಳಿಕ ಪತ್ರಿಕೆಗಳಲ್ಲಿರುವ ಸುದ್ದಿಗಳ ಶೀರ್ಷಿಕೆಗಳನ್ನು ಓದುತ್ತಿದ್ದಳು. ಹೀಗೆ ಕನ್ನಡವನ್ನು ಓದುವ ಆಟದಿಂದಲೇ ಮಾತಾಡುವ ಮೂಲಕವೇ ಮೊದಲು ಕಲಿತ ಆಕೆ ಆ ಬಳಿಕ ಆ ಅಕ್ಷರಗಳನ್ನು ಬರೆಯುವುದಕ್ಕೆ ಕಲಿತು ಕೊಂಡಿರುವುದು ಡಾ. ಶಿವರಾಮ ಕಾರಂತರ ಓದುವ ಆಟ ಕಲಿಕೆಯ ಮೊದಲ ಮೆಟ್ಟಲು ಎನ್ನುವುದು ನಮ್ಮ ಪ್ರತ್ಯಕ್ಷ ಅನುಭವವೂ ಆಯ್ತು. ಅಕ್ಷರಗಳನ್ನು ಬರೆಯಲು ಕಲಿತ ಬಳಿಕ ಅವುಗಳನ್ನು ಜೋಡಿಸಿ, ಚುಕ್ಕಿಗಳನ್ನು ಜೋಡಿಸಿ, ಗೆರೆಗಳನ್ನು ಜೋಡಿಸಿ ಚಿತ್ರ ಬಿಡಿಸಲು ಕಲಿಯುವುದು ಸಾಧ್ಯವಾಯಿತು.

ಕನ್ನಡ ಮಾಧ್ಯಮ ಶಾಲೆಯಾಗಿದ್ದರೂ ಸಮವಸ್ತ್ರ ಜಾರಿಯಲ್ಲಿತ್ತು. ಸಾಮಾನ್ಯವಾಗಿ ಆಗ ಎಲ್ಲಾ ಶಾಲೆಯ ಮಕ್ಕಳಿಗೆ ನೀಲಿ ಬಿಳಿ ಉಡುಪು ರೂಢಿಯಾಗಿತ್ತು. ಆದರೆ ಸೈಂಟ್ ಆ್ಯನ್ಸ್‌ನಲ್ಲಿ ಗುಲಾಬಿ ಹಾಗೂ ಬಿಳಿ ಇದ್ದುದು ಆಕರ್ಷಣೀಯವಾಗಿತ್ತು. ದಿನಾ ಬಸ್ಸಿನ ಪ್ರಯಾಣದಲ್ಲಿ ಕೂಳೂರು ಸಂಕ, ಗುರುಪುರ ಹೊಳೆ ಅಂದರೆ ಫಲ್ಗುಣೀ ನದಿ ದಾಟಿದ ಬಳಿಕ ಸಿಗುವ ಬಂದರು ರಸಗೊಬ್ಬರದ ಕಾರ್ಖಾನೆ, ಇವುಗಳನ್ನೆಲ್ಲಾ ದಾಟಿದ ಬಳಿಕ ಸಿಗುವ ರಸ್ತೆಗಳು, ಬದಿಯಲ್ಲಿ ಸಾಕಷ್ಟು ಮರಗಳಿದ್ದು ಅವುಗಳ ಹೆಸರುಗಳನ್ನು ತಿಳಿಸಿ ಪರಿಚಯಿಸಿ ಹೇಳುವುದು, ನನಗೂ ಇಷ್ಟ. ಅವಳಿಗೂ ಇಷ್ಟ. ಇವುಗಳನ್ನು ತಿಳಿದುಕೊಂಡ ಮೇಲೆ ದಿನಾ ಶಾಲೆಯ ಬಗ್ಗೆ ಅವಳು ಅಂದು ಗ್ರಹಿಸಿದ ಹೊಸ ಹೊಸ ವಿಷಯಗಳನ್ನು ಹೇಳುತ್ತಿದ್ದಳು. ಇವ್ಯಾವುವೂ ಇಲ್ಲದ ದಿನ ಯಾವುದಾದರೂ ಕತೆ ಹೇಳುತ್ತಿದ್ದೆ.

ನಮ್ಮ ಪಕ್ಕದಲ್ಲಿ ಪರಿಚಿತರು ಯಾರಾದರೂ ಕುಳಿತುಕೊಂಡರೆ ಅವರ ಜೊತೆಗಿನ ಮಾತುಕತೆಗಳಲ್ಲಿ ನಮ್ಮ ದಾರಿ ಸಾಗುತ್ತಿತ್ತು. ಹೀಗೆ ಮಗಳು ಶಾಲೆಗೆ ಬರಲಾರಂಭಿಸಿದ ಮೇಲೆ ಅವಳ ಅಪ್ಪ ಅಮ್ಮ ಎಂಬ ನೆಲೆಯಲ್ಲೂ ಅನೇಕರ ಪರಿಚಯ ನಮಗಾಯ್ತು. ಅದರಲ್ಲೂ ಬೆಳಗ್ಗೆ ತುಂಬಿದ ಬಸ್ಸಿಗೆ ಹತ್ತುವ ಅಪ್ಪ ಮಗಳ ಬ್ಯಾಗು ಬುತ್ತಿಗಳನ್ನು ಹಿಡಿದುಕೊಂಡು ಉಪಕರಿಸುವವರು ಕೆಲವರಾದರೆ ಇನ್ನು ಮಗಳನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಮಾತನಾಡುತ್ತಾ ಸಂತೋಷ ಪಡುತ್ತಿದ್ದವರು ಹಲವರು. ಅವರೆಲ್ಲಾದರೂ ಸಂಜೆಯ ಪ್ರಯಾಣದಲ್ಲಿ ಸಿಕ್ಕರೆ ಅವರ ಗುರುತು ಹಿಡಿದು ನನಗೆ ಪರಿಚಯಿಸುವುದು ಅವಳ ಸ್ವಭಾವ. ಇದರಿಂದ ಆ ಮಂದಿಗೂ ಸಂತೋಷವಾಗುತ್ತಿತ್ತು. ಇಂದಿನಂತೆ ಅಂದು ಭಯಪಡುವ ವಾತಾವರಣ ಇರಲಿಲ್ಲ ಎಂದೇ ನನ್ನ ತಿಳುವಳಿಕೆ. ಅದರಲ್ಲೂ ಅವಳ ಈ ಹಿರಿಯ ಸ್ನೇಹಿತರು ಯಾವ ಜಾತಿ, ಯಾವ ಧರ್ಮ ಇವೆಲ್ಲಾ ನಮಗೆ ನಿಧಾನವಾಗಿ ಹೆಚ್ಚು ಪರಿಚಯವಾದಾಗ ತಿಳಿಯುತ್ತಿತ್ತೇ ವಿನಹ ಜಾತಿ, ಧರ್ಮ ತಿಳಿದುಕೊಂಡು ಸ್ನೇಹ ಮಾಡುತ್ತಿರಲಿಲ್ಲ.

ಬಹಳಷ್ಟು ಜನ ವಿದ್ಯಾರ್ಥಿಗಳು ಕೆನರಾ, ಅಲೋಶಿಯಸ್ ಹಾಗೂ ಬದ್ರಿಯಾ ಹೈಸ್ಕೂಲ್ ಕಾಲೇಜುಗಳಿಗೆ ಬರುತ್ತಿದ್ದವರು ಇದ್ದರು. ಅವಳು ಚಿಕ್ಕವರನ್ನು ಅಣ್ಣನೆಂದು, ದೊಡ್ಡವರನ್ನು ಮಾಮ ಎಂದು ಸಂಭೋದಿಸುತ್ತಿದ್ದಳು. ಹೀಗೆ ಪರಿಚಯವಾದ ಅನೇಕ ವಿದ್ಯಾರ್ಥಿಗಳಲ್ಲಿ ಅನೇಕರು ನಮ್ಮ ಮನೆಗೂ ಬಂದು ಹೋಗುವ ಆತ್ಮೀಯತೆಯೂ ಬೆಳೆದಿತ್ತು. ಹಾಗೆಯೇ ಪಣಂಬೂರು, ಲೇಡಿಹಿಲ್ ಶಾಲೆಗಳಿಗೆ ಹೋಗುವ ಮಕ್ಕಳ ಪರಿಚಯವೂ ಆಗಿ ಅವಳ ಬಸ್ಸಿನ ಪ್ರಯಾಣ ಎನ್ನುವುದು ಆಕೆಯ ಪಾಲಿಗೆ ಮಾನಸಿಕ ಹಿಂಸೆ ಎಂದು ಅನ್ನಿಸಿರಲಿಲ್ಲ. ಯಾವತ್ತೂ ಅವಳು ಬಸ್ಸಲ್ಲಿ ನಿದ್ದೆ ಮಾಡುತ್ತಿರಲಿಲ್ಲ. ಆದರೂ ಪ್ರತಿದಿನ ಬೆಳಗ್ಗೆ ಸಂಜೆ ಒಂದೊಂದು ಗಂಟೆಯ ಪ್ರಯಾಣ ದೈಹಿಕವಾಗಿ ದಣಿವು ನೀಡಿರಬಹುದು. ಆದರೆ ಕನ್ನಡ ಮಾಧ್ಯಮವಾದ್ದರಿಂದ ಹೆಚ್ಚಿನ ಮನೆ ಕೆಲಸದ ಹೊರೆಯೂ ಇರುತ್ತಿರಲಿಲ್ಲ. ಮನೆಗೆ ಬಂದ ಬಳಿಕ ತಮ್ಮನೊಂದಿಗಿನ ಆಟ ಅವಳ ದಣಿವು ಮರೆಸಿದಂತೆಯೇ ನಮಗೆ ಅವಳನ್ನು ಅಷ್ಟು ದೂರ ಕರೆದೊಯ್ಯುತ್ತಿದ್ದ ಬಗ್ಗೆ ಅಪರಾಧ ಪ್ರಜ್ಞೆ ಕಾಡುತ್ತಿರಲಿಲ್ಲ. ಅಪರಾಧಿ ಪ್ರಜ್ಞೆ ಎಂದು ಯಾಕೆ ಹೇಳಿದೆನೆಂದರೆ ಬಸ್ಸಿನಲ್ಲಿ ಅನೇಕರು ಯಾಕೆ ಅವಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಹಾಕಿಲ್ಲ ಎನ್ನುವ ಪ್ರಶ್ನೆಗಳನ್ನು ಕೇಳಿ ಕೇಳಿ ಸಾಕಾಗಿತ್ತು.

ಅಲ್ಲದೆ ಶಾಲೆಯಲ್ಲಿ ನಂದಾವರರ ಸಹೋದ್ಯೋಗಿ ಶಿಕ್ಷಕಿಯರು ಕೂಡಾ ಇದೇ ಪ್ರಶ್ನೆ ಕೇಳುತ್ತಿದ್ದರು. ನಮ್ಮ ಉತ್ತರ ಅವರಿಗೆ ಹೀಗಿರುತ್ತಿತ್ತು, ‘‘ಇಷ್ಟು ದೂರ ಕರಕೊಂಡು ಬರುವುದೇ ಅಪರಾಧ. ಅಂತಹುದರಲ್ಲಿ ಅವರ ಬಾಲ್ಯವನ್ನು ಕಸಿದುಕೊಳ್ಳುವ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವ ಅಪರಾಧ ಮಾಡಲಿಲ್ಲ’’ ಎನ್ನುವುದಾಗಿತ್ತು. ಅವಳು ಶಾಲೆಗೆ ಸೇರಿದ ಎರಡನೆ ವರ್ಷಕ್ಕೆ ಮಗನನ್ನು ಕೃಷ್ಣಾಪುರದಲ್ಲಿದ್ದ ಯುವಕ ಮಂಡಲದ ಕಟ್ಟಡದಲ್ಲಿದ್ದ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆಯುತ್ತಿದ್ದ ಬಾಲವಾಡಿಗೆ ನನ್ನ ಸೋದರ ಸೊಸೆ ಕರೆದೊಯ್ಯುತ್ತಿದ್ದಳು. ಇವನನ್ನು ಕರೆದೊಯ್ಯುತ್ತಿದ್ದಾಗ ಯಾರೂ ಮಾತನಾಡಿಸಿದರೂ ಮಾತನಾಡದೆ ಮುಗುಳ್ನಗುವುದಷ್ಟನ್ನೇ ಮಾಡುತ್ತಿದ್ದ ನನ್ನ ಮಗ ನಿಜವಾಗಿಯೂ ಹೆಚ್ಚು ವೌನಿ. ಆದರೆ ಸೂಕ್ಷ್ಮ ಗ್ರಹಿಕೆಯವನು.

ಬಾಲವಾಡಿಯಲ್ಲಿ ಅವನಿಗೆ ರಘುವೀರ ಭಟ್ಟರ ಎರಡನೆ ಮಗ ರಾಜೇಶ ಜೊತೆಗೆ ಸಿಕ್ಕಿದ. ಹೀಗೆ ರಘುವೀರ ಭಟ್ಟ ಹಾಗೂ ಸವಿತಾ ದಂಪತಿಯ ಮಕ್ಕಳಿಬ್ಬರೂ ನನ್ನ ಮಕ್ಕಳಿಬ್ಬರ ಬಾಲವಾಡಿಯ ಸಹಪಾಠಿಗಳು. ಮೂರು ವರ್ಷದಿಂದಲೇ ಬಾಲವಾಡಿಗೆ ಹೋಗುತ್ತಿದ್ದ ಮಗನನ್ನು ಮುಂದಿನ ವರ್ಷ ಮತ್ತೆ ಬಾಲವಾಡಿಗೆ ಮತ್ತೆ ಅಜ್ಜನೇ ಕರೆದೊಯ್ಯುತ್ತಿದ್ದರು. ಕಾರಣ ನನ್ನ ಸೊಸೆಗೆ ಮದುವೆಯಾಗಿ ಅವಳು ಗಂಡನ ಮನೆಗೆ ಹೋದಳು. ಮನೆಯಲ್ಲಿ ಮತ್ತೊಮ್ಮೆ ಎಲ್ಲಾ ವ್ಯವಸ್ಥೆಗಳು ಅವ್ಯವಸ್ಥೆಯಾಯಿತು. ಮಗನನ್ನು ನೋಡಿಕೊಳ್ಳುವುದರೊಂದಿಗೆ ವಯಸ್ಸಾದ ಅತ್ತೆ ಮಾವಂದಿರನ್ನು ಇಬ್ಬರನ್ನೇ ಬಿಟ್ಟು ಬರುವುದು ಸಾಧ್ಯವಿರಲಿಲ್ಲ. ಆಗ ದೊಡ್ಡ ಅತ್ತಿಗೆಯ ಮಗನನ್ನು ನಮ್ಮಲ್ಲಿಗೆ ಕಳುಹಿಸಿದರು. ಇವನು ಈಗ ಮಗನನ್ನು ಬಾಲವಾಡಿಗೆ ಕರೆದೊಯ್ಯುತ್ತಿದ್ದ. ಆದರೆ ನನ್ನ ಮನೆಗೆಲಸ, ಊಟ, ತಿಂಡಿ, ಅಡುಗೆ, ಮನೆಯ ಸ್ವಚ್ಛತೆ, ಬಟ್ಟೆ ಒಗೆಯುವಿಕೆ ಇವೆಲ್ಲಕ್ಕೂ ಸಮಯ ಸಾಕಾಗದೆ ಇರುವುದರೊಂದಿಗೆ ದಿನನಿತ್ಯದ ಬಸ್ಸಿನ ಪ್ರಯಾಣ, ಇವೆಲ್ಲವೂ ನನ್ನನ್ನು ಆಗಾಗ ಕಾಯಿಲೆ ಬೀಳುವಂತೆ ಮಾಡಿತು. ಆಗ ನನಗೆ ಮನೆಗೆಲಸದ ಸಹಾಯಕ್ಕೆ ಒದಗಿದವಳು ಹೊನ್ನೆಕಟ್ಟೆಯಿಂದ ಬರುತ್ತಿದ್ದ ರತ್ನಾ.

ನನ್ನ ಮಗ ಇವಳೊಂದಿಗೆ ಹೊಂದಿಕೊಂಡವನು ಸಂಜೆ ಅವಳೊಂದಿಗೆ ನಾನು ಬಸ್ಸಿಳಿಯುವ ಹೊತ್ತಿಗೆ ಅಲ್ಲೇ ಬಂದು ಕಾಯುತ್ತಿದ್ದ. ಜೊತೆಗೆ ಅವನಿಗೆ ಆ ಬಸ್ಸು, ಕಾರು, ವಾಹನಗಳನ್ನು ನೋಡುವ ಆಸೆ. ಅವನದೇ ಬಾಲ ಭಾಷೆಯಲ್ಲಿ ಆ ಬಸ್ಸುಗಳನ್ನು ಅವನು ಉಚ್ಚರಿಸುತ್ತಿದ್ದುದು ನನಗೆ ವ್ಯಾಕರಣದ ಪರಿಭಾಷೆಗಳನ್ನು ಅರ್ಥೈಸಿಕೊಳ್ಳುವ ಪ್ರಾತ್ಯಕ್ಷಿಕೆಯೂ ಆಗಿತ್ತು. ಹಕಾರದ ಬದಲಿಗೆ ಪಕಾರ ಹೇಳುತ್ತಿದ್ದ ಅವನು ಮೋಹನ್ ಬಸ್ಸನ್ನು ‘ಮೋಪನ್’ ಎನ್ನುತ್ತಿದ್ದ. ವಿಜಯಲಕ್ಷ್ಮೀ ಬಸ್ಸನ್ನು ‘ಮಿಜೆನಿ’ ಎನ್ನುತ್ತಿದ್ದ. ಹಾಗೆಯೇ ‘ವಿಮಾನ’ವನ್ನು ವಿನಾಮ ಎನ್ನುತ್ತಿದ್ದ. ಬಾಲಭಾಷೆಯಲ್ಲಿ ಇಂತಹ ಅಕ್ಷರ ಪಲ್ಲಟಗಳು ಸಹಜವೇ ಆಗಿದ್ದು, ನಿಧಾನಕ್ಕೆ ಮಕ್ಕಳಿಗೆ ಅರಿವು ಮೂಡಿದಂತೆ ಉಚ್ಚಾರಣೆ ಸ್ಪಷ್ಟವಾಗುತ್ತಿತ್ತು. ನಾನು ಒಮ್ಮಿಮ್ಮೆ ತಡವಾದರೆ ರತ್ನಾ ಅವನನ್ನು ಸವಿತಾ ಅವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದಳು. ಆಗ ಸವಿತಾ ಅವರು ತನ್ನ ಮಗ ರಾಜೇಶನ ಜೊತೆ ಆಡುವುದಕ್ಕೆ ಅವಕಾಶ ಕೊಡುವುದರೊಂದಿಗೆ ನನ್ನ ಮಗನಿಗೆ ಹಾಲು ತಿಂಡಿ, ತಿನಿಸುಗಳನ್ನು ನೀಡಿ, ನಾನು ಬರುವುದನ್ನೇ ಕಾಯುತ್ತಾ ಗೇಟಿನ ಬಳಿ ನಿಂತಿರುತ್ತಿದ್ದು ನನ್ನ ಮಗ ಅಲ್ಲಿದ್ದಾನೆ ಎಂದು ತಿಳಸುತ್ತಿದ್ದರು.

ಹೀಗೆ ನನ್ನ ಮಕ್ಕಳಿಬ್ಬರಿಗೂ ರಘುವೀರ ಭಟ್ಟರ ಮನೆ ಬಾಲ್ಯ ಕಾಲದ ಆತ್ಮೀಯ ಮನೆಯಾಗಿತ್ತು. ಹೀಗೆ ನನ್ನ ಮಕ್ಕಳಿಗೆ ಆತ್ಮೀಯರಾದ ಇನ್ನಿಬ್ಬರು ಎಂದರೆ ನನ್ನ ಸಹೋದ್ಯೋಗಿ ಮಿತ್ರರಾದ ಐತಾಳರ ಮಕ್ಕಳು ನರೇಶ್ ಮತ್ತು ಕವಿತಾ. ಸಾಮಾನ್ಯವಾಗಿ ನಾವು ಅವರ ಮನೆಗೆ ಅಥವಾ ಅವರು ನಮ್ಮ ಮನೆಗೆ ಬರುವಾಗಲೂ ಮಕ್ಕಳು ಜೊತೆಯಲ್ಲಿರುತ್ತಿದ್ದರು. ಹೀಗೆ ಒಂದು ದಿನ ಐತಾಳರ ಮನೆಗೆ ಹೋಗಿದ್ದು ಸಂಜೆ ಹೊರಡುವ ವೇಳೆ ನನ್ನ ಮಗಳು ಅಲ್ಲಿಂದ ಹೊರಡಲು ಬಿಡಲಿಲ್ಲ. ಎಷ್ಟೇ ತಿಳುವಳಿಕೆ ನೀಡಿದರೂ, ಸಮಾಧಾನಪಡಿಸಿದರೂ ಆ ದಿನ ಅಲ್ಲೇ ಅವರೊಂದಿಗೆ ಇರಬೇಕೆಂದು ಹಠ ಹಿಡಿದವಳು ನಾವು ಹೊರಟರೂ ನಮ್ಮ ಜೊತೆಗೆ ಬಾರದೆ ಕವಿತಾಳೊಂದಿಗೆ ಇರುತ್ತೇನೆ ಎಂದಾಗ ಐತಾಳರು ಮತ್ತು ಅವರ ಮಡದಿ ಭಾರತಿ ‘‘ಇರಲಿ. ನಾಳೆ ಅವಳನ್ನು ಕಳುಹಿಸುತ್ತೇವೆ’’ ಎಂದಾಗ ನಾವು ಉಪಾಯವಿಲ್ಲದೆ ಅವಳನ್ನು ಅಲ್ಲೇ ಬಿಟ್ಟು ಬರಬೇಕಾಯಿತು.

ಆರಾಮ ವಾಗಿದ್ದವಳನ್ನು ಮರು ದಿನ ಸಂಜೆ ಕವಿತಾ ಮತ್ತು ಐತಾಳರು ಜೊತೆಗೆ ಬಂದು ಬಿಟ್ಟು ಹೋದರು. ಮಕ್ಕಳ ಮನಸ್ಸು ಹೇಗೆ ಯೋಚಿಸುತ್ತದೆ, ಏನನ್ನು ಗ್ರಹಿಸುತ್ತದೆ ಎಂದು ತಿಳಿಯುವುದು ಹೆತ್ತವರಿಗೂ ಅಸಾಧ್ಯವಾದ ವಿಷಯವೇ ಹೌದು. ಇದೀಗ ನಮ್ಮ ಮನೆಯ ಎದುರಿನ ಅಜ್ಜಿಗೆ ನಮ್ಮ ಜಾತಿ ಮರೆತು ನಮ್ಮ ರೀತಿ ನೀತಿಗಳು ಒಂದಿಷ್ಟು ಅರ್ಥವಾಗಿ ಮಾತನಾಡುವಲ್ಲಿ ಆತ್ಮೀಯತೆ ತೋರುತ್ತಿದ್ದರು. ಆ ಕಾರಣದಿಂದ ಅವರ ಮನೆಯ ಮೊಮ್ಮಗಳು ಮೀನಾಕ್ಷಿ ನನ್ನ ಮಕ್ಕಳೊಂದಿಗೆ ಆಟವಾಡುವುದಕ್ಕೆ ನಮ್ಮ ಮನೆಗೆ ಬರುತ್ತಿದ್ದಳು. ಹಾಗೆಯೇ ಕಲಾವತಿ ಟೀಚರ್ ಮಕ್ಕಳು ಮೋಹನ್ ಮತ್ತು ಉಮಾ ಕೂಡಾ ಬರುತ್ತಿದ್ದರು. ಹೀಗೆ ಮಕ್ಕಳ ಬಾಲ್ಯ ಅಜ್ಜ, ಅಜ್ಜಿಯಂದಿರೊಂದಿಗೆ ಅವರನ್ನು ನೋಡಿಕೊಳ್ಳುತ್ತಿದ್ದ ಗಿರಿಜಾ, ರತ್ನಾ, ಸರೋಜಿನಿಯೊಂದಿಗೆ ಬಂಧುಗಳಂತೆಯೇ ಕೂಡು ಕುಟುಂಬದ ಸಂತಸವನ್ನು ಪಡೆದಿತ್ತು. ನಾವು ಅವುಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಿದ್ದೆವು ಎನ್ನುವುದು ನಮ್ಮ ಮಿತಿ ಹಾಗೂ ಸಾಧ್ಯತೆಗಳಲ್ಲಿ ತೃಪ್ತಿ ನೀಡಿರುವ ಸಂಗತಿ. ಯಾಕೆಂದರೆ ಬಾಲ್ಯವೇ ಮುಂದಿನ ಜೀವನದ ತಳಹದಿಯಲ್ಲವೇ?

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News