×
Ad

ಯೋಗಿ ಆಡಳಿತದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳಲ್ಲಿ ಹೆಚ್ಚಳ

Update: 2017-08-23 23:16 IST

ಲಕ್ನೋ,ಆ.23: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗಿವೆ.

 ಆರ್‌ಟಿಐ ಕಾರ್ಯಕರ್ತ ಸಂಜಯ ಶರ್ಮಾ ಅವರು ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಉ.ಪ್ರ.ಮಹಿಳಾ ಆಯೋಗವು ನೀಡಿರುವ ಉತ್ತರದಲ್ಲಿ ಈ ಕಳವಳಕಾರಿ ವಿಷಯ ಬೆಳಕಿಗೆ ಬಂದಿದೆ.

ಆಯೋಗವು ತನ್ನ ಉತ್ತರದಲ್ಲಿ ಮಾಯಾವತಿ(2007-2012) ಮತ್ತು ಅಖಿಲೇಶ್ ಯಾದವ(2012-ಮಾರ್ಚ್ 2017) ಅವರ ಅಧಿಕಾರಾವಧಿಗಳಲ್ಲಿ ತಾನು ಸ್ವೀಕರಿಸಿದ್ದ ದೂರುಗಳು ಮತ್ತು ಅವುಗಳ ವಿಲೇವಾರಿಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನೂ ಒದಗಿಸಿದೆ.

ಆಯೋಗವು ಮಾಯಾವತಿಯವರ ಅಧಿಕಾರಾವಧಿಯಲ್ಲಿ 97,000ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿತ್ತು ಮತ್ತು ಅಷ್ಟೂ ದೂರುಗಳನ್ನು ವಿಲೇವಾರಿಗೊಳಿಸಿತ್ತು. ಅಖಿಲೇಶ್ ಅಧಿಕಾರಾವಧಿಯಲ್ಲಿ ಸುಮಾರು 1.80 ಲ.ದೂರುಗಳನ್ನು ಸ್ವೀಕರಿಸಿ, ಆ ಪೈಕಿ ಸುಮಾರು 1.63 ಲ.ದೂರುಗಳನ್ನು ವಿಲೇವಾರಿಗೊಳಿಸಿತ್ತು.

ಬಿಜೆಪಿ ಆಡಳಿತದ ಮೊದಲ ಮೂರು ತಿಂಗಳ ಅವಧಿಯಲ್ಲಿ 10,000ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿರುವ ಆಯೋಗವು ಕೇವಲ 2,800 ದೂರುಗಳನ್ನು ವಿಲೇವಾರಿ ಮಾಡಿದೆ ಎಂದು ಆರ್‌ಟಿಐ ಉತ್ತರವು ತಿಳಿಸಿದೆ.

ಅಖಿಲೇಶ್ ಸರಕಾರಕ್ಕೆ ಹೋಲಿಸಿದರೆ ಯೋಗಿ ಸರಕಾರದಡಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಶೇ.17ರಷ್ಟು ಏರಿಕೆಯಾಗಿದೆ ಎನ್ನುವುದನ್ನು ಆಯೋಗದ ಅಂಕಿಅಂಶಗಳು ಬಹಿರಂಗಗೊಳಿಸಿವೆ. ಅಖಲೇಶ್ ಅವಧಿಯಲ್ಲಿ ಮಾಸಿಕ ಸರಾಸರಿ 2,996 ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದರೆ ಯೋಗಿ ಆಡಳಿತದಲ್ಲಿ ಈ ಪ್ರಮಾಣ 3,506ಕ್ಕೇರಿದೆ.

ಮಹಿಳೆಯರಿಗೆ ಸುರಕ್ಷತೆಯನ್ನು ಖಚಿತಪಡಿಸುವುಲ್ಲಿ ಬಿಜೆಪಿ ಸರಕಾರವು ವಿಫಲ ಗೊಂಡಿದೆ ಎನ್ನುವುದನ್ನು ಆಯೋಗದ ಉತ್ತರವು ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿಗಳು ಈ ಅಂಕಿಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಬೇಕು ಎಂದು ಶರ್ಮಾ ಹೇಳಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಯೋಗಿ ಸರಕಾರವು ತೀವ್ರ ಟೀಕೆಗಳನ್ನು ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News