ಕೊಡಿಂಞಿ ಫೈಝಲ್ ಕೊಲೆ ಆರೋಪಿಯ ಹತ್ಯೆ

Update: 2017-08-24 06:31 GMT

ತಿರೂರ್, ಆ.24: ಕೊಡಿಂಞಿ ಫೈಝಲ್ ಕೊಲೆ ಪ್ರಕರಣದ ಆರೋಪಿ ಬಿಪನ್ ನನ್ನು ಹತ್ಯೆಗೈದ ಘಟನೆ ಇಂದು ಬೆಳಗ್ಗೆ 7:15ಕ್ಕೆ ತಿರೂರ್ ಪುಳಿಂಚೆಟ್ಟಿಲ್ ನಲ್ಲಿ ನಡೆದಿದೆ.  ಬಿಪಿನ್ ಗಂಭೀರಗಾಯಗಳೊಂದಿಗೆ ರಸ್ತೆ ಬದಿಯಲ್ಲಿ  ಬಿದ್ದಿರುವುದನ್ನು ನೋಡಿದ ಊರವರು ತಕ್ಷಣ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ. ಪೊಲೀಸರು ಬಂದು ಬಿಪಿನ್‍ನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲೆ  ಬಿಪಿನ್ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಇಂದು ಬೆಳಗ್ಗೆ ಬೈಕ್‍ನಲ್ಲಿ ಬರುತ್ತಿದ್ದ ಬಿಪಿನ್‍ನ್ನು ದುಷ್ಕರ್ಮಿಗಳು ತಡೆದು ನಿಲ್ಲಿಸಿ ಇರಿದಿದ್ದಾರೆ. ಮತಾಂತರಗೊಂಡದ್ದಕ್ಕಾಗಿ ಕೊಡಿಂಞಿ ಪುಲ್ಲಾಣಿ ಫೈಝಲ್‍ರನ್ನು ಕೊಲೆಮಾಡಿದ ಪ್ರಕರಣದಲ್ಲಿ ಬಿಪಿನ್ ಎರಡನೆ ಆರೋಪಿಯಾಗಿದ್ದಾನೆ. 

2016 ನವೆಂಬರ್ 9ರಂದು ಕೊಡಿಂಞಿ ಫಾರೂಕ್ ನಗರ ಪುಲ್ಲಾಣಿ ಎಂಬಲ್ಲಿನ  ಫೈಝಲ್‍ರನ್ನು ದುಷ್ಕರ್ಮಿಗಳ ತಂಡ ಇರಿದು ಕೊಂದಿತ್ತು. ಎಪ್ರಿಲ್ 27ಕ್ಕೆ ಬಿಪಿನ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಫೈಝಲ್ ಕೊಲೆ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ಬೇರೆ ಕೃತ್ಯಗಳನ್ನು ಎಸಗಬಾರದು ಎನ್ನುವ ವ್ಯವಸ್ಥೆಯಲ್ಲಿ ಆತನಿಗೆ ಮಂಜೇರಿ ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ಕೋರ್ಟು ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News