ನ್ಯಾಯಾಲಯದ ತೀರ್ಪನ್ನು ಸರಕಾರವು ಸ್ವಾಗತಿಸುತ್ತದೆ, ಆದರೆ ಖಾಸಗಿತನ ಪರಮ ಹಕ್ಕಲ್ಲ: ರವಿಶಂಕರ ಪ್ರಸಾದ್
ಹೊಸದಿಲ್ಲಿ,ಆ.24: ಖಾಸಗಿತನವು ಮೂಲಭೂತ ಹಕ್ಕು ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಗುರುವಾರ ಹೇಳುವ ಮೂಲಕ ಸರಕಾರಕ್ಕೆ ಭಾರೀ ಹಿನ್ನಡೆ ಎಂದೇ ಪರಿಗಣಿಸಲಾಗಿರುವ ತೀರ್ಪಿಗೆ ಕೇಂದ್ರದ ಮೊದಲ ಪ್ರತಿಕ್ರಿಯೆಯನ್ನು ನೀಡಿದರು. ವ್ಯಕ್ತಿಯ ಖಾಸಗಿತನವು ಅವಿಚ್ಛಿನ್ನ ಮೂಲಭೂತ ಹಕ್ಕು ಎಂದು ಸಂವಿಧಾನವು ಖಾತರಿ ಪಡಿಸಿಲ್ಲ ಎಂದು ಸರಕಾರವು ನ್ಯಾಯಾಲಯದಲ್ಲಿ ವಾದಿಸಿತ್ತು.
ಖಾಸಗಿತನ ಕುರಿತು ಸರ್ವೋಚ್ಚ ನ್ಯಾಯಾಲಯದ ಒಂಭತ್ತು ನ್ಯಾಯಾಧೀಶರ ಪೀಠದ ತೀರ್ಪು ಹೊರಬಿದ್ದ ನಂತರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್, ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಆಗಿರಬೇಕು ಎಂಬ ಸರಕಾರದ ನಿಲುವಿನಲ್ಲಿ ಬದಲಾವಣೆಯಾಗಿಲ್ಲ. ನ್ಯಾಯಾಲಯದ ಇಂದಿನ ತೀರ್ಪಿನ ತಿರುಳು 2016ರಲ್ಲಿ ಆಗಿನ ಕಾನೂನು ಸಚಿವ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ಹೇಳಿದ್ದನ್ನೇ ಎತ್ತಿ ಹಿಡಿದಿದೆ. ಒಂಭತ್ತು ನ್ಯಾಯಾಧೀಶರ ಪೀಠವು ರಚನೆಯಾಗುವ ಬಹಳ ಮೊದಲೇ,ಆಧಾರ್ ಕಾಯ್ದೆಯನ್ನು ಮಂಡಿಸುವಾಗ ಸರಕಾರವು ಸಂವಿಧಾನದ 21ನೇ ವಿಧಿಯಡಿ ಖಾಸಗಿತನದ ಹಕ್ಕು ಮೂಲಭೂತವಾಗಿದೆ ಎನ್ನುವುದನ್ನು ಒಪ್ಪಿಕೊಂಡಿತ್ತು ಎಂದು ಹೇಳಿದರು.
ಖಾಸಗಿತನ ಪರಮ ಹಕ್ಕು ಅಲ್ಲ. ಅದು ಕೆಲವು ಸಕಾರಣವಾದ ನಿರ್ಬಂಧಗಳಿಗೆ ಒಳಪಟ್ಟಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಪೀಠದಲ್ಲಿಯ ವಿವಿಧ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಪ್ರಸಾದ್, ತನ್ನ ಮಾತಿಗೆ ಪೂರಕವಾಗಿ ಅವರ ತೀರ್ಪುಗಳಲ್ಲಿಯ ಸಂಬಂಧಿತ ಭಾಗಗಳನ್ನು ಓದಿ ಹೇಳಿದರು.
ತೀರ್ಪಿನ ಬಳಿಕ ಸರಕಾರವನ್ನು ಟೀಕಿಸುತ್ತಿರುವುದಕ್ಕಾಗಿ ಪ್ರತಿಪಕ್ಷಗಳನ್ನು, ವಿಶೇಷವಾಗಿ ಕಾಂಗೆಸ್‌ನ್ನು ತರಾಟೆಗೆತ್ತಿಕೊಂಡ ಅವರು, ಕಾಂಗ್ರೆಸಿಗರು ನಮ್ಮನ್ನು ಟೀಕಿಸುತ್ತಿದ್ದಾರೆ, ಎಡಪಕ್ಷದವರೂ ಅವರೊಂದಿಗೆ ಸೇರಿಕೊಂಡಿದ್ದಾರೆ. ವ್ಯಕ್ತಿಗತ ಸ್ವಾತಂತ್ರವನ್ನು ರಕ್ಷಿಸುವ ವಿಷಯ ಬಂದಾಗ ಕಾಂಗ್ರೆಸಿನ ದಾಖಲೆಯೇನು ಎನ್ನುವುದನ್ನು ತಾನು ತಿಳಿಯಲು ಬಯಸಿದ್ದೇನೆ ಎಂದು ಕುಟುಕಿದರು.
ನರೇಂದ್ರ ಮೋದಿಯವರ ಸರಕಾರವು ತುರ್ತು ಪರಿಸ್ಥಿತಿಯ ಸಂದರ್ಭ ವ್ಯಕ್ತಿಗತ ಸ್ವಾತಂತ್ರಗಳಿಗಾಗಿ ಹೋರಾಡಿದ್ದ ನಾಯಕರ ನೇತೃತ್ವ ಹೊಂದಿದೆ ಎಂದು ಪ್ರಸಾದ್ ಹೇಳಿದರು.