×
Ad

ಎನ್‌ಕೌಂಟರ್‌ಗೆ ನಾಗರಿಕ ಬಲಿ: ಕಾಶ್ಮೀರದಲ್ಲಿ ತೀವ್ರ ಪ್ರತಿಭಟನೆ

Update: 2017-08-24 19:13 IST

ಶ್ರೀನಗರ, ಆ.24: ಮಂಗಳವಾರ ಹಂದ್ವಾರದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಾಗರಿಕನೋರ್ವ ಮೃತಪಟ್ಟಿರುವುದನ್ನು ಭದ್ರತಾಪಡೆಗಳು ದೃಢಪಡಿಸಿದ ಬಳಿಕ ಬುಧವಾರದಿಂದ ಅಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

 ಮೃತಪಟ್ಟ ವ್ಯಕ್ತಿಯನ್ನು 21ರ ಹರೆಯದ ಶಾಹಿದ್ ಮೀರ್ ಎಂದು ಗುರುತಿಸಲಾಗಿದೆ. ಹಂದ್ವಾರದ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶಾಹಿದ್ ಆ.21ರಿಂದ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಹೌದು, ಓರ್ವ ನಾಗರಿಕನ ಹತ್ಯೆಯಾಗಿದೆ. ಕೆಲ ದಿನದಿಂದ ಈತ ನಾಪತ್ತೆಯಾಗಿರುವುದಾಗಿ ಕುಟುಂಬದವರು ತಿಳಿಸಿದ್ದರು. ಆತ ಗುಂಡಿನ ಚಕಮಕಿ ನಡೆದ ಅರಣ್ಯದಲ್ಲಿ ಹೇಗೆ ಪತ್ತೆಯಾದ ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಡಿಐಜಿ ಎಸ್.ಪಿ. ವೈದ್ ತಿಳಿಸಿದ್ದಾರೆ. ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಮೃತಪಟ್ಟಿರುವುದಾಗಿ ಮಂಗಳವಾರ ಸೇನಾಪಡೆ ಹೇಳಿಕೆ ನೀಡಿತ್ತು.

   ಇದೊಂದು ವ್ಯವಸ್ಥಿತ ಎನ್‌ಕೌಂಟರ್ ಎಂದು ಶಾಹಿದ್ ಕುಟುಂಬದವರು ಆರೋಪಿಸಿದ್ದಾರೆ. ಸೋಮವಾರ ಸಂಜೆ ಮನೆಯಿಂದ ಹೊರಗೆ ತೆರಳಿದ್ದ ಶಾಹಿದ್ ಬಳಿಕ ಹಿಂದಿರುಗಿಲ್ಲ. ಹಲವೆಡೆ ಹುಡುಕಾಡಿದ ಬಳಿಕ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.

   ಬುಧವಾರ ಸಮೀಪದ ಸೇನಾ ಶಿಬಿರದಿಂದ ಅಧಿಕಾರಿಗಳು ಕರೆ ಮಾಡಿ ವ್ಯಕ್ತಿಯೋರ್ವರ ಮೃತದೇಹವನ್ನು ಗುರುತಿಸುವಂತೆ ತಿಳಿಸಿದರು. ಅದರಂತೆ ಅಲ್ಲಿಗೆ ಹೋಗಿ ನೋಡಿದಾಗ ಅದು ತಮ್ಮ ಹಿರಿಯ ಮಗನ ಶವವಾಗಿತ್ತು ಎಂದು ಶಾಹಿದ್ ಪೋಷಕರು ತಿಳಿಸಿದ್ದಾರೆ. ಶಾಹಿದ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ವರದಿಯನ್ನು ಕುಟುಂಬದವರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News