ದಿಲ್ಲಿ : ಸಫ್ದರ್‌ಜಂಗ್ ಆಸ್ಪತ್ರೆ ವೈದ್ಯರ ಮುಷ್ಕರ
ಹೊಸದಿಲ್ಲಿ, ಆ.24: ವೈದ್ಯರೊಬ್ಬರ ಮೇಲೆ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದು, ಇಂತಹ ಘಟನೆ ಮರುಕಳಿಸದಂತೆ ತಡೆಯಬೇಕು ಹಾಗೂ ಭದ್ರತೆ ಹೆಚ್ಚಿಸಬೇಕೆಂದು ಒತ್ತಾಯಿಸಿ ದಿಲ್ಲಿ ಸಫ್ದರ್‌ಜಂಗ್ ಆಸ್ಪತ್ರೆಯ ನಿವಾಸಿ ವೈದ್ಯರು(ರೆಸಿಡೆಂಟ್ ಡಾಕ್ಟರ್) ಅನಿರ್ಧಿಷ್ಠಾವಧಿಯ ಮುಷ್ಕರ ಆರಂಭಿಸಿದ್ದು ರೋಗಿಗಳು ಪರದಾಡುವಂತಾಗಿದೆ.
ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದ್ದಾರೆ ಎಂದು ಆರೋಪಿಸಿ, ರೋಗಿಯೋರ್ವ ವೈದ್ಯರ ಮೇಲೆ ಬುಧವಾರ ಮಧ್ಯಾಹ್ನ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಇಂತಹ ಹಲ್ಲೆ ಘಟನೆಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ. ಹಲ್ಲೆ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ನಿವಾಸಿ ವೈದ್ಯರ ಸಂಘದ ಅಧ್ಯಕ್ಷ ಧೀರ್ ಸಿಂಗ್ ತಿಳಿಸಿದ್ದಾರೆ.
ವೈದ್ಯರ ಮುಷ್ಕರದಿಂದಾಗಿ ತುರ್ತುಚಿಕಿತ್ಸಾ ವಿಭಾಗ ಹಾಗೂ ಇತರ ವಿಭಾಗಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವುಂಟಾಗಿದೆ.