ಸಂಭಾವ್ಯ ಹಿಂಸಾಚಾರ ತಡೆಗೆ ಸೂಕ್ತ ಕ್ರಮ : ಕೇಂದ್ರಕ್ಕೆ ಪಂಜಾಬ್, ಹರ್ಯಾಣ ಹೈಕೋರ್ಟ್ ಸೂಚನೆ
ಚಂಡೀಗಡ, ಆ.24: ದೇರಾ ಸಚಾ ಸೌದ ಸಂಘಟನೆಯ ನಾಯಕ , ಸ್ವಘೋಷಿತ ಧಾರ್ಮಿಕ ಮುಖಂಡ ಗುರ್ಮೀತ್ ರಾಮ್‌ರಹೀಮ್ ಸಿಂಗ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತೀರ್ಪು ಶುಕ್ರವಾರ (ಆಗಸ್ಟ್ 25ರಂದು) ಹೊರಬೀಳಲಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಹಿಂಸಾಚಾರವನ್ನು ತಡೆಗಟ್ಟಲು ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ವಿಚಾರಣೆ ನಡೆಯಲಿರುವ ಪಂಚಕುಲದಲ್ಲಿ ರಾಮ್‌ರಹೀಮ್ ಸಿಂಗ್ ಅವರ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಈಗಾಗಲೇ ಸೇರಿಕೊಂಡಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಅಲ್ಲದೆ ಸೂಕ್ತ ಭದ್ರತೆಯನ್ನು ಒದಗಿಸಲು ಪೊಲೀಸರು ವಿಫಲರಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹರ್ಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಎಚ್ಚರಿಕೆ ನೀಡಿದೆ.
ನಿಷೇಧಾಜ್ಞೆ ಇರುವಾಗಲೂ ಅಷ್ಟೊಂದು ಜನ ಒಂದೆಡೆ ಸೇರಲು ಹೇಗೆ ಸಾಧ್ಯವಾಯಿತು ಎಂದು ನ್ಯಾಯಾಲಯ ಪಂಜಾಬ್ ಹಾಗೂ ಹರ್ಯಾಣ ಸರಕಾರವನ್ನು ಪ್ರಶ್ನಿಸಿತು.
ಈ ಮಧ್ಯೆ, ಶುಕ್ರವಾರ ವಿಚಾರಣೆಗೆ ಹಾಜರಾಗುವುದಾಗಿ ಸಿಂಗ್ ತಿಳಿಸಿದ್ದಾರೆ. ನಾನು ಈ ನೆಲದ ಕಾನೂನನ್ನು ಎಂದಿಗೂ ಗೌರವಿಸುವ ವ್ಯಕ್ತಿ. ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆಯಿದೆ. ಶಾಂತಿ ಕಾಪಾಡುವಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಹಲವಾರು ಬೆಂಬಲಿಗರನ್ನು ಹೊಂದಿರುವ ರಾಮ್‌ರಹೀಮ್ ಸಿಂಗ್ ತನ್ನದೇ ನಿರ್ಮಾಣದ ಕೆಲವು ಸಿನೆಮಾಗಳ ಪಾತ್ರ ವಹಿಸಿದ್ದಾರೆ. 2002ರಲ್ಲಿ ಇಬ್ಬರು ಮಹಿಳೆಯರನ್ನು ಅತ್ಯಾಚಾರ ನಡೆಸಿರುವ ಆರೋಪ ಇವರ ಮೇಲಿದೆ. ತೀರ್ಪು ಹೊರಬಿದ್ದ ಬಳಿಕ ವ್ಯಾಪಕ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ ಎಂದು ಪಂಚಕುಲ ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಜಯ್ ಕುಮಾರ್ ತಿಳಿಸಿದ್ದಾರೆ. ಸಿಂಗ್ ಬೆಂಬಲಿಗರು ಲಾಠಿ ಮತ್ತು ಗನ್‌ಗಳ ಸಹಿತ ಸನ್ನದ್ಧರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪ್ರತಿಬಂಧಕ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಒಂದು ವೇಳೆ ಸಿಂಗ್ ಬೆಂಬಲಿಗರು ಹಿಂಸಾಚಾರಕ್ಕೆ ಮುಂದಾದರೆ ಅವರನ್ನು ಬಂಧನದಲ್ಲಿಡುವ ಸಲುವಾಗಿ ಚಂಢೀಗಡದಲ್ಲಿ ಶಾಲೆಯೊಂದರ ಮೈದಾನವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಲಾಗಿದೆ.
ಶನಿವಾರದವರೆಗೆ ಹರ್ಯಾಣಕ್ಕೆ ಬಸ್ ಸಂಚಾರ ಇರುವುದಿಲ್ಲ ಎಂದು ಪಂಜಾಬ್ ಸರಕಾರ ತಿಳಿಸಿದೆ. ಇಂಟರ್‌ನೆಟ್ ಸೇವೆಯನ್ನು ಮೂರು ದಿನಾವಧಿಗೆ ಸ್ಥಗಿತಗೊಳಿಸಲಾಗಿದೆ. ಹರ್ಯಾಣ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳೂ ಅಂಬಾಲಾದವರೆಗೆ ಮಾತ್ರ ಪ್ರಯಾಣಿಸಲಿದೆ. ತೀರ್ಪು ಪ್ರಕಟಿಸಲಿರುವ ನ್ಯಾಯಾಲಯದ ಆವರಣದ 1 ಕಿ.ಮೀ. ವ್ಯಾಪ್ತಿಗೆ ಯಾರಿಗೂ ಪ್ರವೇಶಾವಕಾಶ ನೀಡಲಾಗುತ್ತಿಲ್ಲ. ಸುಮಾರು 5,000 ಪೊಲೀಸರು ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಪಂಚಕುಲ ಮತ್ತು ಚಂಡೀಗಡದಲ್ಲಿ ಸರಕಾರಿ ಕಚೇರಿಗಳು ಶುಕ್ರವಾರ ಮುಚ್ಚಿರುತ್ತವೆ. ಇನ್ಫೋಸಿಸ್ ಸೇರಿದಂತೆ ಹಲವು ಪ್ರಮುಖ ಖಾಸಗಿ ಸಂಸ್ಥೆಗಳು ತಮ್ಮ ನೌಕರರಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವ ಅವಕಾಶ ನೀಡಿದೆ.
ಈ ಮಧ್ಯೆ, ದೊಣ್ಣೆಗಳನ್ನು ಹಿಡಿದಿರುವ ಸಾವಿರಾರು ಮಹಿಳೆಯರು ದೇರಾ ಸಚಾ ಸೌದದ ಕೇಂದ್ರಕಚೇರಿಯ ಸುತ್ತ ಕಾವಲು ನಿಂತಿದ್ದು , ‘ಗುರುವಿಗೆ ಹಾನಿ’ಯಾದರೆ ಎಲ್ಲವನ್ನೂ ನಾಶಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಾವು 7 ಕೋಟಿ ಜನರಿದ್ದೇವೆ..
ನಾವು 7 ಕೋಟಿ ಜನರಿದ್ದೇವೆ. ಹಲವರು ನಿದ್ದೆಯಿಲ್ಲದ ರಾತ್ರಿಯನ್ನು ಕಳೆದಿದ್ದಾರೆ. ತಮ್ಮ ‘ಗುರು’ವಿನ ವಿರುದ್ಧ ತೀರ್ಪು ಪ್ರಕಟವಾದರೆ ಏನು ಬೇಕಾದರೂ ನಡೆಯಬಹುದು ಎಂದು ಸಿಂಗ್ ಬೆಂಬಲಿಗರು ಎಚ್ಚರಿಸಿದ್ದಾರೆ.
ನಮ್ಮ ಶ್ರೇಯಸ್ಸಿಗಾಗಿ ಕಠಿಣ ಪರಿಶ್ರಮ ಪಟ್ಟಿರುವ ನಮ್ಮ ‘ಗುರು’ವಿಗೆ ಕಿರುಕುಳ ಕೊಟ್ಟಿರುವುದಕ್ಕೆ ಸರಕಾರ ನಾಚಿಗೆ ಪಡಬೇಕು ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.