×
Ad

ಇಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆ ಸದ್ಯಕ್ಕೆ ಇಲ್ಲ: ಕೇಂದ್ರ ಸರಕಾರದ ನಿರ್ಧಾರ

Update: 2017-08-24 21:05 IST

ಹೊಸದಿಲ್ಲಿ, ಆ.24: ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪರೀಕ್ಷೆ ನಡೆಸುವ ಯೋಜನೆಯನ್ನು ತಡೆಹಿಡಿಯಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

2018ರ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಯೋಜನೆಯಿದೆ ಎಂದು ದೇಶದ ತಾಂತ್ರಿಕ ಶಿಕ್ಷಣದ ನಿಯಂತ್ರಣ ಸಂಸ್ಥೆಯಾಗಿರುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ(ಎಐಸಿಟಿಇ) ಕಳೆದ ಮಾರ್ಚ್‌ನಲ್ಲಿ ತಿಳಿಸಿತ್ತು. ಆದರೆ ಇದೀಗ ಈ ಯೋಜನೆಯನ್ನು ಕೆಲ ಸಮಯದವರೆಗೆ ತಡೆಹಿಡಿಯಲು ನಿರ್ಧರಿಸಲಾಗಿದೆ.

ಈ ನಿರ್ಧಾರವನ್ನು ಕೈಬಿಡಲಾಗಿಲ್ಲ. ವೈದ್ಯಕೀಯ ಮತ್ತು ಡೆಂಟಲ್ ಕಾಲೇಜುಗಳಿಗೆ ಪ್ರವೇಶಾವಕಾಶಕ್ಕಾಗಿ ನಡೆಸಲಾಗುತ್ತಿರುವ ‘ನೀಟ್’ ಪರೀಕ್ಷೆಯ ಯಶಸ್ಸಿನ ಅವಲೋಕನ ನಡೆಸಿದ ಬಳಿಕ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಬಗ್ಗೆ ನಿರ್ಧರಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಪರೀಕ್ಷೆಯ ಕಾರ್ಯಸಾಧ್ಯತೆಯ ಕುರಿತು ಎಐಸಿಟಿಇ ವರದಿ ಸಲ್ಲಿಸಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯಲು ಸಿಬಿಎಸ್‌ಇಯ ಅಡಿಯಲ್ಲಿ ಜೆಇಇ(ಮೈನ್) ಪರೀಕ್ಷೆ ನಡೆಸಲಾಗುತ್ತಿದ್ದು ಪ್ರತೀ ವರ್ಷ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ ಹಲವಾರು ರಾಜ್ಯಗಳು ಪ್ರತ್ಯೇಕ ಪರೀಕ್ಷೆ ನಡೆಸುತ್ತಿವೆ. ಕೆಲವು ಕಾಲೇಜುಗಳು ಪಿಯುಸಿ ಅಂಕದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುತ್ತಿದೆ. ಜೊತೆಗೆ ಹಲವು ಖಾಸಗಿ ಕಾಲೇಜುಗಳೂ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿವೆ. ದೇಶದಲ್ಲಿ ವಿವಿಯೊಂದಿಗೆ ಸಂಯೋಜಿಸಲ್ಪಟ್ಟಿರುವ 3,300ಕ್ಕೂ ಹೆಚ್ಚು ಅನುಮೋದಿತ ಇಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತೀವರ್ಷ ಸರಾಸರಿ 16 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸುವ ಯೋಜನೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News