ವಿಲನ್ ನ ನಿರೀಕ್ಷೆಯಲ್ಲಿ ಮೊಲಿವುಡ್
ಮೋಹನ್‌ಲಾಲ್ ನಾಯಕನಾಗಿ ಅಭಿನಯಿಸಿರುವ ‘ವಿಲನ್’ ಚಿತ್ರದ ಬಿಡುಗಡೆಯನ್ನೇ ಮಲಯಾಳಂ ಚಿತ್ರರಂಗ ಕಾತರದಿಂದ ಎದುರು ನೋಡುತ್ತಿದೆ. ಮಾಡಂಬಿ, ಗ್ರಾಂಡ್‌ಮಾಸ್ಟರ್ ಹಾಗೂ ಮಿ.ಫ್ರಾಡ್ ಚಿತ್ರದ ಬಳಿಕ ಲಾಲೇಟನ್ ಹಾಗೂ ಬಿ.ಉಣ್ಣಿಕೃಷ್ಣನ್ ಕಾಂಬಿನೇಶನ್‌ನಲ್ಲಿ ನಿರ್ಮಾಣಗೊಂಡ ನಾಲ್ಕನೆ ಚಿತ್ರ ಇದಾಗಿದೆ.
ಭಜರಂಗಿ ಭಾಯ್‌ಜಾನ್ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಸ್ಯಾಂಡಲ್‌ವುಡ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಈ ಚಿತ್ರದ ಮೂಲಕ ಮೊಲಿವುಡ್‌ನಲ್ಲಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈವರೆಗೂ ವಿಲನ್ ಚಿತ್ರದ ಕಥೆಯ ಬಗ್ಗೆ ಚಿತ್ರತಂಡ ಭಾರೀ ಗೌಪ್ಯತೆಯನ್ನು ಪಾಲಿಸುತ್ತಾ ಬಂದಿತ್ತು. ಆದರೆ ಈಗ ಕೇಳಿಬರುತ್ತಿರುವ ವದಂತಿಗಳನ್ನು ನಂಬುವುದಾದರೆ, ಈ ಚಿತ್ರವು ಎಂಟು ಮಕ್ಕಳ ನಿಗೂಢ ಸಾವಿನ ಸುತ್ತ ಹೆಣೆಯಲಾದ ಕಥಾವಸ್ತುವನ್ನು ಹೊಂದಿದೆ. ವಿಲನ್‌ನಲ್ಲಿ ಮೋಹನ್‌ಲಾಲ್, ಮಕ್ಕಳ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದ ಮೂಲಕ ತಮಿಳು ನಟ ವಿಶಾಲ್, ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ದಾರೆ. ಚಿತ್ರದಲ್ಲಿ ಅವರದು ನೆಗೆಟಿವ್ ಶೇಡ್ ಇರುವ ಪಾತ್ರವಂತೆ. ಮಲಯಾಳಂನ ಜನಪ್ರಿಯ ನಟ ಮಂಜುವಾರಿಯರ್ ಪೋಷಕ ನಟಿಯಾಗಿ ಅಭಿನಯಿಸಿರುವ ವಿಲನ್‌ಗೆ ಹಂಸಿಕಾ ಮೋಟ್ವಾನಿ ನಾಯಕಿ. ಅಂದ ಹಾಗೆ ಹಂಸಿಕಾಗೂ ಇದು ಚೊಚ್ಚಲ ಮಲಯಾಳಂ ಚಿತ್ರ.
ವಿಲನ್ ಅತ್ಯಾಧುನಿಕ 8ಕೆ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ಪ್ರಪ್ರಥಮ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಯನ್ನು ಕೂಡಾ ಪಡೆದುಕೊಂಡಿದೆ. ತೆಲುಗು ನಟಿ ರಾಶಿಖನ್ನಾ ಪೊಲೀಸ್ ಆಫೀಸರ್ ಆಗಿ ಮಿಂಚಲಿದ್ದಾರೆ. ಒಟ್ಟಿನಲ್ಲಿ ಖ್ಯಾತ ನಟ,ನಟಯರ ಸಂಗಮವಾದ ವಿಲನ್ ಮಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದಂತೂ ನಿಜ. ಎಲ್ಲವೂ ಸರಿಹೋದಲ್ಲಿ ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳ್ಳಲಿದೆ.