ರಾಧಿಕಾ ಪಂಡಿತ್ ಬೆಳ್ಳಿತೆರೆಗೆ ರೀಎಂಟ್ರಿ
ರಾಕಿಂಗ್‌ಸ್ಟಾರ್ ಯಶ್ ಜೊತೆ ವಿವಾಹವಾಗಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ರಾಧಿಕಾ ಪಂಡಿತ್ ಚಿತ್ರರಂಗದಿಂದ ತುಸು ಬ್ರೇಕ್ ಪಡೆದುಕೊಂಡಿದ್ದರು. ರಾಧಿಕಾಪಂಡಿತ್, ಯಶ್ ಹಸೆಮಣೆಯೇರಿ ಒಂದು ವರ್ಷವೇ ಕಳೆದಿದೆ. ಈ ಅವಧಿಯಲ್ಲಿ ರಾಧಿಕಾ ಚಿತ್ರದಲ್ಲಿ ನಟಿಸದಿರುವುದು ಆಕೆಯ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಈಗ ರಾಧಿಕಾ ಅವರಿಗೊಂದು ಸಿಹಿಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ಆಕೆ ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗೆ ಆಕೆ ಚಿತ್ರಕಥೆಯೊಂದನ್ನು ಓದಿದ್ದು, ನಟಿಸಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ.
ಮಣಿರತ್ನಂ ಅವರ ನಿರ್ದೇಶನದ ಗರಡಿಯಲ್ಲಿ ಪಳಗಿರುವ ಪ್ರಿಯಾ ಆ್ಯಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ರಾಧಿಕಾ ನಟಿಸಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದುಬರದಿದ್ದರೂ, ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಚಿತ್ರದ ನಾಯಕನೆಂಬುದು ಖಚಿತವಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ಸೆಪ್ಟಂಬರ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.
ಅಂದಹಾಗೆ ರಾಧಿಕಾಗೆ ಇಷ್ಟು ಹೊತ್ತು ಚಿತ್ರದಲ್ಲಿ ನಟಿಸಲು ಮನಸ್ಸಿರಲಿಲ್ಲ ವೆಂದಲ್ಲ. ಹಾಗೆ ಹೇಳುವುದಾದರೆ ಆಕೆ ಈ ಒಂದು ವರ್ಷದಲ್ಲಿ ಏನಿಲ್ಲವೆಂದರೂ 20 ಸ್ಕ್ರಿಪ್ಟ್‌ಗಳನ್ನು ಓದಿದ್ದಾರೆ. ಆದರೆ ಅವ್ಯಾವುದೂ ಹಿಡಿಸದ ಕಾರಣ ಆಕೆ ನಟಿಸಲು ಹಿಂದೇಟು ಹಾಕಿದ್ದರು. ವಿವಾಹಕ್ಕೂ ಮೊದಲೇ ರಾಧಿಕಾ ತುಂಬಾ ಚ್ಯೂಸಿ ನಟಿಯಾಗಿದ್ದು, ಒಳ್ಳೆಯ ಕಥಾವಸ್ತುವಿದ್ದ ಚಿತ್ರಗಳಿಗೆ ಮಾತ್ರವೇ ಓ.ಕೆ. ಅನ್ನುತ್ತಿದ್ದರು. ಮದುವೆಯ ನಂತರವೂ ಅದನ್ನೇ ರೂಢಿಸಿಕೊಂಡು ಹೋಗಲು ಆಕೆ ನಿರ್ಧರಿಸಿದ್ದಾರೆ.