ಗುರ್ಮೀತ್‌ಗೆ ನೀಡಿದ್ದ ಝಡ್ ಪ್ಲಸ್ ಭದ್ರತೆ ವಾಪಸ್
ಚಂಡಿಗಡ,ಆ.26: ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನೆಂದು ನ್ಯಾಯಾಲಯವು ಘೋಷಿಸಿದ ಬಳಿಕಆತನಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಹರ್ಯಾಣ ಮುಖ್ಯ ಕಾರ್ಯದರ್ಶಿ ಡಿ.ಎಸ್.ಧೇಸಿ ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೋಹ್ಟಕ್ ಜೈಲಿನಲ್ಲಿ ಗುರ್ಮೀತ್‌ಗೆ ವಿಶೇಷ ಉಪಚಾರ ನೀಡಲಾಗುತ್ತಿದೆ ಎನ್ನುವು ದನ್ನು ನಿರಾಕರಿಸಿದ ಅವರು, ಶುಕ್ರವಾರ ಆತನನ್ನು ಬಂಧಿಸಿದ ಘಳಿಗೆಯಲ್ಲಿಯೇ ಆತನ ಝಡ್ ಪ್ಲಸ್ ಭದ್ರತೆ ಸ್ವಯಂಚಾಲಿತವಾಗಿ ರದ್ದಾಗಿದೆ. ಆತನನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ. ಆತನಿಗೆ ಎಸಿ ಒದಗಿಸಲಾಗಿದೆ ಎಂಬ ವರದಿ ಸುಳ್ಳಾಗಿದೆ. ಇತರ ಕೈದಿಗಳಿಗೆ ನೀಡುವ ಊಟವನ್ನೇ ಆತನಿಗೂ ನೀಡಲಾಗುತ್ತಿದೆ ಎಂದರು.
ಗುರ್ಮೀತ್ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಲು ಸಿರ್ಸಾದಿಂದ ತನ್ನ ವಾಹನಗಳ ಸಾಲಿನೊಂದಿಗೆ ಪಂಚಕುಲಾಕ್ಕೆ ಆಗಮಿಸಿದ್ದಾಗ ಹರ್ಯಾಣ ಪೊಲೀಸ್ ಸಿಬ್ಬಂದಿಗಳು ಮತ್ತು ಖಾಸಗಿ ಕಮಾಂಡೋಗಳು ಭದ್ರತೆಗಾಗಿ ಜೊತೆಯಲ್ಲಿದ್ದರು. ತೀರ್ಪಿನ ಪ್ರಕಟಣೆಯ ಬಳಿಕ ಆತನನ್ನು ರೋಹ್ಟಕ್‌ನ ಸುನರಿಯಾದಲ್ಲಿರುವ ಜೈಲಿನಲ್ಲಿ ಡಲಾಗಿದೆ.
ಇದಕ್ಕೂ ಮುನ್ನ ಹರ್ಯಾಣ ಡಿಜಿಪಿ(ಬಂದೀಖಾನೆಗಳು) ಕೆ.ಪಿ.ಸಿಂಗ್ ಅವರೂ ಗುರ್ಮೀತ್‌ಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ ಎನ್ನುವುದನ್ನು ನಿರಾಕರಿಸಿದ್ದರು.
ಗುರ್ಮೀತ್‌ನ ಚಲನವಲನಗಳ ಮೆಲೆ ನಿಗಾಯಿರಿಸಲು ಆತನ ಬ್ಯಾರಕ್‌ನ ಬಳಿ ನಾಲ್ವರು ಜೈಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದರು. ಜೈಲಿನಲ್ಲಿ ಗುರ್ಮೀತ್‌ಗೆ ಯಾವುದೇ ಭದ್ರತಾ ಸವಾಲು ಎದುರಾಗುವುದಿಲ್ಲ, ಆ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದರು.
ಜೈಲಿನ ಹೊರಗೆ ಭಾರೀ ಸಂಖ್ಯೆಯಲ್ಲಿ ಅರೆ ಸೇನಾಪಡೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.