×
Ad

ಗೋಹತ್ಯೆ ಆರೋಪ; ಎರಡು ಸಮುದಾಯಗಳ ಮಧ್ಯೆ ಘರ್ಷಣೆ: ಐವರ ಬಂಧನ

Update: 2017-08-26 20:09 IST

ಲಕ್ನೊ, ಆ.26: ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಅದೌಲಿ ಗ್ರಾಮದಲ್ಲಿ ಗೋಹತ್ಯೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ಮಧ್ಯೆ ಘರ್ಷಣೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಇತರ ಹತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಗ್ರಾಮದ ಗಡಿಭಾಗದಲ್ಲಿ ದನದ ಕಳೇಬರದ ಅವಶೇಷಗಳು ಪತ್ತೆಯಾದ ಬಳಿಕ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿ ದೊರೆತ ದನದ ಮಾಂಸವನ್ನು ಪರೀಕ್ಷೆಗೆಂದು ಕೊಂಡೊಯ್ದರು. ಆ ಬಳಿಕ ಹೆಚ್ಚಾಗಿ ಯುವಕರೇ ಇದ್ದ ಗುಂಪೊಂದು ದಾಂಧಲೆ ನಡೆಸಿದ್ದು, ಗ್ರಾಮದ ಎರಡು ಮಸೀದಿಗಳಿಗೆ ಹಾನಿ ಎಸಗಿದೆ ಎನ್ನಲಾಗಿದೆ. 

ಈ ಸಂದರ್ಭ ಎರಡೂ ಸಮುದಾಯದ ಜನರು ಸ್ಥಳದಲ್ಲಿ ಸೇರಿ ಪರಸ್ಪರ ಕಲ್ಲೆಸೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕೋಮಿನ ಸೇರಿದ ಐವರನ್ನು ಪೊಲೀಸರು ಬಂಧಿಸಿದ್ದು ಹತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಗೋಹತ್ಯೆ, ಕಲ್ಲೆಸೆತ ಹಾಗೂ ಎರಡು ಮಸೀದಿಗೆ ಹಾನಿ ಎಸಗಿದ ಘಟನೆಗೆ ಸಂಬಂಧಿಸಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ . ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News