ಸಾಹೇಬ: ಸಂಯಮ ಬೇಡುವ ನಿರೂಪಣೆ
ಚಿತ್ರರಂಗದಲ್ಲಿ ಹೊಸತೊಂದು ಮಾದರಿ ಸೃಷ್ಟಿಸಿದವರು ರವಿಚಂದ್ರನ್. ತೆರೆಯನ್ನು ಬಣ್ಣಬಣ್ಣದ ಕನಸುಗಳನ್ನು ಹರವಿದ ರವಿಚಂದ್ರನ್ ಪುತ್ರನ ಸಿನೆಮಾ ಎನ್ನುವ ಕಾರಣಕ್ಕೆ ‘ಸಾಹೇಬ’ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಈ ಚಿತ್ರದಲ್ಲಿಯೂ ಬಣ್ಣಬಣ್ಣದ ಕ್ಯಾನ್ವಾಸ್ ಇರುತ್ತದೆ ಎಂದೇ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳು ಅಂದುಕೊಂಡಿದ್ದರೇನೋ? ಆದರೆ ಅವರೆಲ್ಲರ ನಿರೀಕ್ಷೆಯನ್ನು ಹುಸಿಮಾಡುವಂತಿದೆ ‘ಸಾಹೇಬ’.
ಈ ವಿಚಾರದಲ್ಲಿ ರವಿಚಂದ್ರನ್ ತಮ್ಮ ಪುತ್ರನ ಚೊಚ್ಚಲ ಸಿನೆಮಾಗೆ ಸೀದಾ-ಸಾದಾ ಕತೆಯನ್ನೇ ಮಾಡಿಸಿದ್ದಾರೆ. ಮನೋರಂಜನ್ ಕೂಡ ಸ್ಟಾರ್‌ಗಿರಿಯ ಬೆನ್ನಿಗೆ ಬೀಳದೆ ಸಂಯಮದ ಪಾತ್ರ, ನಟನೆಯೊಂದಿಗೆ ಗಮನ ಸೆಳೆಯುತ್ತಾರೆ. ಇತರರಿಗೆ ಒಳಿತನ್ನು ಬಯಸುತ್ತಾ ನಿರ್ಲಿಪ್ತವಾಗಿ ಬದುಕುವ ಆದರ್ಶ ಯುವಕ ಮನು. ಕೆಳಮಧ್ಯಮ ಕುಟುಂಬದ ಯುವತಿ ನಂದಿನಿಗಾಗಿ ಆಕೆಗೆ ಗೊತ್ತಾಗದಂತೆ ನೆರವಾಗುತ್ತಾ ಹೋಗುತ್ತಾನೆ. ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಆಕೆಯ ವ್ಯಕ್ತಿತ್ವದಲ್ಲಿ ಮಹತ್ವದ ಮಾರ್ಪಾಡಾಗುತ್ತದೆ. ಚಿತ್ರ ನಿರ್ದೇಶಕನ ನೆರವಿನೊಂದಿಗೆ ಮನು ಆಕೆಗೆ ಸಿನೆಮಾ ನಟಿಯಾಗುವ ಅವಕಾಶ ಕಲ್ಪಿಸುತ್ತಾನೆ. ಈ ಹಂತದಲ್ಲಿ ತನಗೆ ಅರಿವಿಲ್ಲದಂತೆಯೇ ಆಕೆಯೆಡೆ ಆಕರ್ಷಿತನಾಗುವ ಮನು ಕ್ರಮೇಣ ಇದೊಂದು ಭ್ರಮೆಯೆಂದು ನಿರ್ಲಿಪ್ತನಾಗುತ್ತಾನೆ. ಮುಂದೊಮ್ಮೆ ಅಚಾನಕ್ಕಾಗಿ ಮನು ನಿರ್ದೇಶಿಸುವ ನಾಟಕದ ಪಾತ್ರದಲ್ಲಿ ನಂದಿನಿ ನಟಿಸುವ ಸಂದರ್ಭ ಎದುರಾಗುತ್ತದೆ. ಸ್ವಂತ ಬಲದ ಮೇಲೆ ತಾನು ಬೆಳೆದೆನೆಂದು ಬೀಗುವ ನಂದಿನಿ ಲೌಕಿಕ ಜಗತ್ತಿನ ಹುಸಿ ದೊಡ್ಡಸ್ಥಿಕೆಗಳನ್ನು ಕಂಡುಕೊಳ್ಳುತ್ತಾ ಹೋಗುತ್ತಾಳೆ. ಮತ್ತೊಂದೆಡೆ ಮನು ಮಾದರಿಯಾಗಿ ನಿಲ್ಲುತ್ತಾನೆ. ಹೀಗೆ ಸೂಕ್ಷ್ಮ ಎಳೆಯೊಂದಿಗೆ ನಿರ್ದೇಶಕರು ಚಿತ್ರಕಥೆ ಮಾಡಿಕೊಂಡಿದ್ದಾರೆ.
ನಾಯಕನಾಗಿ ಪಾದಾರ್ಪಣೆ ಮಾಡುವ ಹುಡುಗನಿಗೆ ಇಂಥದ್ದೊಂದು ಕತೆ ಮಾಡುವುದು ಸುಲಭವಲ್ಲ. ಸಂಯಮ ಬೇಡುವ ಇಂತಹ ಕತೆ, ಪಾತ್ರವನ್ನು ಮನೋರಂಜನ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಶಾನ್ವಿ ಶ್ರೀವಾತ್ಸವ್ ಅವರಿಗೂ ನಟನೆಗೆ ಹೆಚ್ಚು ಸ್ಕೋಪ್ ಇದ್ದು, ಆಕೆ ಚೆನ್ನಾಗಿ ನಟಿಸಿದ್ದಾರೆ. ಆದರೆ ಇಂಥದ್ದೊಂದು ಸೂಕ್ಷ್ಮ ಕತೆಯನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ ನಿರ್ದೇಶಕ ಭರತ್ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದೇ ಹೇಳಬಹುದು. ಅಲ್ಲದೆ ಮೇಕಿಂಗ್ ದೃಷ್ಟಿಯಿಂದಲೂ ಚಿತ್ರ ಇನ್ನೊಂದಿಷ್ಟು ಕಳೆಗಟ್ಟಬೇಕಿತ್ತು.
ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡುಗಳು ಹೆಚ್ಚು ಸಮಯ ನೆನಪಿನಲ್ಲಿ ಉಳಿಯುವುದಿಲ್ಲ. ಹಂಸಲೇಖ ರಚಿಸಿ, ಶಂಕರ್ ಗಣೇಶ್ ಸಂಗೀತ ಸಂಯೋಜಿಸಿರುವ ’ನಾನು ನನ್ನ ಹೆಂಡ್ತಿ’ಚಿತ್ರದ ಯಾರೆ ನೀನು ರೋಜಾ ಹೂವೇ... ಹಾಡನ್ನು ಇಲ್ಲಿ ಬಳಕೆ ಮಾಡಿದ್ದಾರೆ. ಅದೊಂದು ಹಾಡು ನೆನಪಿನಲ್ಲಿ ಉಳಿಯುತ್ತದಷ್ಟೆ! ನಿರ್ದೇಶನ ಮತ್ತು ಸಂಕಲನದ ಮಿತಿಗಳ ಮಧ್ಯೆ ಒಂದೊಳ್ಳೆ ಸಿನೆಮಾ ಆಗಬಹುದಾದ ಇದು ಸಾಧಾರಣ ಸಿನೆಮಾ ಎನಿಸಿಕೊಂಡಿದೆ.
ನಿರ್ದೇಶನ : ಭರತ್ ನಿರ್ಮಾಣ : ಜಯಣ್ಣ ಮತ್ತು ಭೋಗೇಂದ್ರ ಸಂಗೀತ : ವಿ.ಹರಿಕೃಷ್ಣ ಛಾಯಾಗ್ರಾಹಕ : ಜಿ.ಎಸ್.ವಿ.ಸೀತಾರಾಂ, ತಾರಾಗಣ : ಮನೋರಂಜನ್, ಶಾನ್ವಿ ಶ್ರೀವಾತ್ಸವ್, ಲಕ್ಷ್ಮೀ, ಬುಲೆಟ್ ಪ್ರಕಾಶ್, ಪ್ರಮೀಳಾ ಜೋಷಾಯ್ ಮತ್ತಿತರರು.
ರೇಟಿಂಗ್ - ** 1/3
* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ