ನೋಟು ರದ್ದತಿಯಿಂದ ಬೆಳಕಿಗೆ ಬಂದ ಕಾಳಧನ ಎಷ್ಟು ಗೊತ್ತೇ?

Update: 2017-08-27 04:00 GMT

ಹೊಸದಿಲ್ಲಿ, ಆ.27: ನವೆಂಬರ್ 8ರ ನೋಟು ರದ್ದತಿ ಬಳಿಕ ಎಷ್ಟು ಮಂದಿ ಕಾಳಧನಿಕರು 1000 ಹಾಗೂ 500 ರೂಪಾಯಿಯ ಹಳೆಯ ನೋಟುಗಳನ್ನು ಹೊಂದಿ, ಬಹಿರಂಗಗೊಳಿಸದ ನೋಟಿನ ಪ್ರಮಾಣ ಎಷ್ಟು ಗೊತ್ತೇ? ಈ ಪ್ರಶ್ನೆಗೆ ಜನಸಾಮಾನ್ಯರಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೆ ಯಾರಿಗೂ ಎಂಟು ತಿಂಗಳು ಕಳೆದರೂ ಉತ್ತರ ಸಿಕ್ಕಿಲ್ಲ. ಆದರೆ ಇದೀಗ ಆರ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿರುವ ಅಂಕಿಅಂಶಗಳ ಪ್ರಕಾರ, ಚಲಾವಣೆಯಲ್ಲಿದ್ದ ಶೇಕಡ 99ರಷ್ಟು 1000 ರೂಪಾಯಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ.

2017ರ ಮಾರ್ಚ್ ಅಂತ್ಯಕ್ಕೆ ಚಲಾವಣೆಯಲ್ಲಿದ್ದ ನೋಟುಗಳ ಅಂಕಿ ಸಂಖ್ಯೆಗಳ ಪ್ರಕಾರ, 8,925 ಕೋಟಿ ರೂಪಾಯಿ ಮೌಲ್ಯದ 1000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು. ಆರ್‌ಬಿಐ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳು ಎಂದರೆ ಆರ್‌ಬಿಐ ವಶದಲ್ಲಿರುವ ನೋಟುಗಳನ್ನು ಹೊರತುಪಡಿಸಿ ಸಾರ್ವಜನಿಕರು, ಬ್ಯಾಂಕ್ ಖಜಾನೆಗಳು ಹೊಂದಿರುವ ಇತರ ನೋಟುಗಳು. ಅಂದರೆ ನವೆಂಬರ್ 8ರ ನಿರ್ಧಾರದ ಬಳಿಕ ಬ್ಯಾಂಕ್‌ಗೆ ಜಮೆ ಆಗದ ನೋಟುಗಳು.

ಇದು ಅಗಾಧ ಮೊತ್ತ ಎಂದು ಕಾಣಬಹುದು. ಆದರೆ ನವೆಂಬರ್ 8ರ ಮೊದಲು ಚಲಾವಣೆಯಲ್ಲಿದ್ದ 1000 ರೂಪಾಯಿ ಮುಖಬೆಲೆಯ 6,858 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಫೆಬ್ರವರಿ 3ರಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಲೋಕಸಭೆಯಲ್ಲಿ ತಿಳಿಸಿದ್ದರು. ಅಂದರೆ ಅದರ ಮೌಲ್ಯ 6.86 ಲಕ್ಷ ಕೋಟಿ ರೂ. ಇದಕ್ಕೆ ಹೋಲಿಸಿದರೆ 8925 ಕೋಟಿ ರೂ. ಎಂದರೆ ಒಟ್ಟು ಚಲಾವಣೆಯ ಕೇವಲ ಶೇಕಡ 1.3ರಷ್ಟು ಮಾತ್ರ. 1000 ರೂಪಾಯಿ ಮೌಲ್ಯದ ಶೇಕಡ 98.3ರಷ್ಟು ನೋಟುಗಳು ಆರ್‌ಬಿಐ ತೆಕ್ಕೆಗೆ ಬಂದಂತಾಗಿದೆ.

ಜೆಎನ್‌ಯು ಅರ್ಥಶಾಸ್ತ್ರ ಪ್ರಾಧ್ಯಾಪಕ ಸುರ್ಜಿತ್ ಮಜೂಂದಾರ್ ಅವರ ಪ್ರಕಾರ, 500 ರೂಪಾಯಿಯ ಹಳೆ ನೋಟು ಕೂಡಾ ಇಷ್ಟೇ ಪ್ರಮಾಣದಲ್ಲಿ ವಾಪಸಾಗಿರುವ ಸಾಧ್ಯತೆ ಇದೆ. ಅಂದರೆ ನೋಟು ರದ್ದತಿಯಿಂದ ಬಯಲಿಗೆ ಬಂದ ಕಾಳಧನ ಅತ್ಯಲ್ಪ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News