×
Ad

ಪರಿತ್ಯಕ್ತ ಪತ್ನಿಗೆ ಮಾಸಿಕ ನಾಲ್ಕು ಲ.ರೂ.ಜೀವನಾಂಶ ನೀಡುವಂತೆ ‘ಸೂಪರ್ ಶ್ರೀಮಂತ’ನಿಗೆ ನ್ಯಾಯಾಲಯದ ಆದೇಶ

Update: 2017-08-27 15:18 IST

ಹೊಸದಿಲ್ಲಿ,ಆ.29: ನಂಬಲು ಸಾಧ್ಯವಾಗುವುದಿಲ್ಲ,ಆದರೂ ಇದು ನಿಜ! ತನ್ನ ಪರಿತ್ಯಕ್ತ ಪತ್ನಿ ಮತ್ತು ತಮ್ಮಿಬ್ಬರ ಏಕೈಕ ಅಪ್ರಾಪ್ತ ವಯಸ್ಕ ಪುತ್ರಿಗೆ ಮಾಸಿಕ ನಾಲ್ಕು ರೂ.ಗಳಷ್ಟು ಭಾರೀಮೊತ್ತವನ್ನು ಜೀವನಾಂಶವಾಗಿ ನೀಡುವಂತೆ ದಿಲ್ಲಿಯ ನ್ಯಾಯಾಲಯವೊಂದು ಆಕೆಯ ಕೋಟ್ಯಾಧೀಶ್ವರ ಪತಿಗೆ ಆದೇಶಿಸಿದೆ. ಇಷ್ಟೇ ಅಲ್ಲ,ಪ್ರತಿ ವರ್ಷ ಈ ಜೀವನಾಂಶದ ಮೊತ್ತವನ್ನು ಶೇ.15ರಷ್ಟು ಹೆಚ್ಚಿಸುವಂತೆಯೂ ನಿರ್ದೇಶ ನೀಡಿದೆ. ಬಿಜಿನೆಸ್ ಮ್ಯಾಗಝಿನ್‌ವೊಂದರ ‘ಸೂಪರ್ ರಿಚ್’ ಪಟ್ಟಿಯಲ್ಲಿ ಮಹಿಳೆಯ ಪತಿಯ ಹೆಸರು ಇತ್ತು ಮತ್ತು ಆತನ ಉದ್ಯಮದ ನಿವ್ವಳ ಮೌಲ್ಯ 921 ಕೋ.ರೂ. ಎನ್ನುವುದನ್ನು ನ್ಯಾಯಾಲಯವು ತನ್ನ ಗಮನಕ್ಕೆ ತೆಗೆದುಕೊಂಡಿತ್ತು.

ಎರಡು ಆರ್ಥಿಕ ವರ್ಷಗಳಲ್ಲಿ ಪತಿರಾಯನ ಆದಾಯ ಗಮನಾರ್ಹವಾಗಿ ಏರಿದೆ ಮತ್ತು ಇದನ್ನು ಕಡೆಗಣಿಸಲಾಗದು ಎನ್ನುವುದನ್ನು ಬೆಟ್ಟುಮಾಡಿದ ಪ್ರಧಾನ ನ್ಯಾಯಾಧೀಶ ನರೋತ್ತಮ ಕೌಶಲ್ ಅವರು, ಅದಕ್ಕನುಗುಣವಾಗಿ ಜೀವನಾಂಶ ಮೊತ್ತದಲ್ಲಿ ವಾರ್ಷಿಕ ಶೇ.15ರಷ್ಟು ಕಡ್ಡಾಯ ಏರಿಕೆಯನ್ನು ಸೂಚಿಸಿದ್ದಾರೆ.

ಫಾರ್ಚ್ಯೂನ್ ಇಂಡಿಯಾದ ‘ಸೂಪರ್ ರಿಚ್’ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವುದು ಮತ್ತು ಕುಟುಂಬದ ಕಂಪನಿಗಳ ಆಸ್ತಿಗಳ ನಿವ್ವಳ ಮೌಲ್ಯ 921 ಕೋ.ರೂ.ಗಳೆಂದು ಕಾಣಿಸಲಾಗಿದ್ದು, ಇದು ಪತಿ ಭಾರತದ ಶ್ರೀಮಂತ ಉದ್ಯಮಿ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದನ್ನು ಖಚಿತಪಡಿಸಿದೆ ಎಂದು ನ್ಯಾಯಾಧೀಶರು ಹೇಳಿದರು. ಹೆತ್ತವರ ಏಕೈಕ ಪುತ್ರನಾಗಿರುವ ‘ಸೂಪರ್ ಶ್ರೀಮಂತ’ ಪತ್ನಿ ಮತ್ತು ಮಗಳನ್ನು ತೊರೆದ ಬಳಿಕ ತನ್ನ ತಂದೆಯೊಂದಿಗೆ ವಾಸವಾಗಿದ್ದಾನೆ.

2008,ಮಾರ್ಚ್‌ನಲ್ಲಿ ತನ್ನನ್ನು ಮತ್ತು ಮಗಳನ್ನು ಗಂಡನ ಮನೆಯಿಂದ ಹೊರದಬ್ಬ ಲಾಗಿತ್ತು ಮತ್ತು ಬಳಿಕ ತಾನು ಜೀವನಾಂಶವನ್ನು ಕೋರಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದೆ ಎಂದು ಮಹಿಳೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದಳು. ಆದರೆ ಈ ಅರ್ಜಿ ವಿಚಾರಣೆಗೆ ಬಾಕಿ ಇರುವಂತೆಯೇ ಪತಿರಾಯ 2011,ಜನವರಿಯಲ್ಲಿ ವಿಚ್ಛೇದನವನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ.

2011,ಆ.4ರಂದು ಮಹಿಳೆ ಜೀವನಾಂಶವನ್ನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು ಮತ್ತು ನ್ಯಾಯಾಲಯವು 2013,ಫೆ.8ರಂದು ಆಕೆಗೆ ಮಾಸಿಕ 1.25 ಲ.ರೂ.ಗಳ ಜೀವನಾಂಶವನ್ನು ಮಂಜೂರು ಮಾಡಿತ್ತು.

ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ 2011,ಮಾ.5ರಂದು ಆಕೆಗೆ ಮಾಸಿಕ 75,000 ರೂ.ಗಳ ಜೀವನಾಂಶವನ್ನು ಮಂಜೂರು ಮಾಡಲಾಗಿತ್ತು.

ಮಹಿಳೆಯ ಪತಿ ಇವೆರಡೂ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಅಂತಿಮವಾಗಿ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಸರ್ವೋಚ್ಚ ನ್ಯಾಯಾಲಯವು 2014,ಎಪ್ರಿಲ್‌ನಲ್ಲಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಿತ್ತು. ಬಳಿಕ ಮಹಿಳೆ ಉಚ್ಚ ನ್ಯಾಯಾಲಯಕ್ಕೆ ತಾನು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಳು ಮತ್ತು ಮಾಸಿಕ ಏಳು ಲಕ್ಷ ರೂ.ಗಳ ಜೀವನಾಂಶವನ್ನು ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು.

ಮಹಿಳೆಯ ಪತಿ ತಾನು ಹಲವಾರು ಕಂಪನಿಗಳ ನಿರ್ದೇಶಕನಾಗಿದ್ದರೂ, ಒಂದು ಕಂಪನಿಯಿಂದ ಮಾತ್ರ ಮಾಸಿಕ 90,000 ರೂ.ಗಳ ವೇತನವನ್ನು ಪಡೆಯುತ್ತಿದ್ದೇನೆ ಎಂದು ವಾದಿಸಿದ್ದ. ಆದರೆ ನ್ಯಾಯಾಲಯವು ಅದನ್ನು ಪುರಸ್ಕರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News