ಮಹಿಳಾ ಹಜ್ ಯಾತ್ರಾರ್ಥಿಯ ಮಕ್ಕಾ ಪ್ರಯಾಣವನ್ನು ತಡೆಹಿಡಿದ ಎಮಿಗ್ರೇಶನ್ ಅಧಿಕಾರಿಗಳು

Update: 2017-08-27 11:02 GMT

ನೆಡುಂಬಶ್ಶೇರಿ,ಆ.27: ಮಹಿಳಾ ಹಜ್ ಯಾತ್ರಿಕರೊಬ್ಬರ  ಪ್ರಯಾಣವನ್ನು  ಎಮಿಗ್ರೇಶನ್ ಅಧಿಕಾರಿಗಳು ತಡೆಹಿಡಿದ ಘಟನೆ ನಡೆದಿದೆ.

ತಿರೂರ್ ಚೆರಿಯಮುಂಡುಂ ಪುಯಕ್ಕಾಟಿಲ್ ಮನೆಯ ಕುಂಞಿ ಮುಹಮ್ಮದ್‍ರ ಪತ್ನಿ ಮೈಮೂನಾರ ಹಜ್‍ಯಾತ್ರೆಗೆ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಮಿಗ್ರೇಶನ್ ವಿಭಾಗ ಅಡ್ಡಿಪಡಿಸಿದೆ. ಇವರ ಪಾಸ್‍ಪೋರ್ಟನ್ನು ಎಮಿಗ್ರೇಶನ್ ಅಧಿಕಾರಿಗಳು ಮುಟ್ಟುಗೋಲು  ಹಾಕಿದ್ದಾರೆ. ಯಾವ ಕಾರಣದಿಂದ ದಂಪತಿಯನ್ನು ಹಜ್ ಯಾತ್ರೆ ಕೈಗೊಳ್ಳದಂತೆ ತಡೆಯಲಾಗಿದೆ ಎಂದು ಸ್ಪಷ್ಟವಾಗಿಲ್ಲ. ಮೈಮುನಾರ ಪಾಸ್‍ಪೋರ್ಟ್ ಮುಟ್ಟುಗೋಲು ಹಾಕಿದ್ದರಿಂದ ಪತಿ ಕುಂಞಿ ಮುಹಮ್ಮದ್‍ರ ಪ್ರಯಾಣವೂ ಸ್ಥಗಿತವಾಗಿದೆ.

ಪಾಸ್‍ಪೋರ್ಟನ್ನು ಮುಟ್ಟುಗೋಲು ಹಾಕಬೇಕೆಂದು ಪಾಸ್‍ಪೋರ್ಟ್ ಅಧಿಕಾರಿ ಸೂಚಿಸಿದ್ದರಿಂದ ಎಮಿಗ್ರೇಶನ್ ವಿಭಾಗ ಕ್ರಮ ಜರಗಿಸಿದೆ. ಕೇರಳದಿಂದ ಶನಿವಾರ ಹಜ್‍ಗೆ ತೆರಳುವ ಕೊನೆಯ ವಿಮಾನದಲ್ಲಿ ದಂಪತಿ ಪ್ರಯಾಣಿಸಬೇಕಿತ್ತು. ಹಜ್‍ಕಮಿಟಿ ಪದಾಧಿಕಾರಿಗಳು ಕೂಡಲೆ ಎರ್ನಾಕುಲಂ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಅವರು ಪಾಸ್‍ಪೋರ್ಟ್ ಅಧಿಕಾರಿಯೊಡನೆ ಮಾತನಾಡಿದ್ದಾರೆ. ಆದರೆ, ತಾನು ಕೊಯಮತ್ತೂರಿನಲ್ಲಿರುವುದರಿಂದ ದಾಖಲೆಗಳನ್ನು ಪರಿಶೀಲಿಸದೆ ಏನನ್ನೂ ಮಾಡುವಂತಿಲ್ಲ ಎಂದು ಪಾಸ್‍ಪೋರ್ಟ್ ಅಧಿಕಾರಿ ಜಿಲ್ಲಾಧಿಕಾರಿಗೆ  ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ ಮತ್ತು ಹಜ್ ಕಮಿಟಿ ಪದಾಧಿಕಾರಿಗಳು ದಂಪತಿಯನ್ನು ರವಿವಾರ ಮುಂಬೈ ಮೂಲಕ ಮಕ್ಕಾಗೆ ಕಳುಹಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ದಂಪತಿಯನ್ನು ಹಜ್‍ಕ್ಯಾಂಪ್‍ಗೆ ಕರೆತಂದು ಶನಿವಾರವೇ ಕುಟುಂಬದ ಸದಸ್ಯರು ಊರಿಗೆ ಹೋಗಿದ್ದರು. ಹಜ್ ಕಮಿಟಿ ಪದಾಧಿಕಾರಿಗಳು ನಂತರ ಮನೆಯವರನ್ನು ಕರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News