ಭಾರತ ಸೇನೆಗೆ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ
ಹೊಸದಿಲ್ಲಿ, ಆ.27: ಸುದೀರ್ಘಾವಧಿಯ ಕಾಯುವಿಕೆಯ ಬಳಿಕ ಇದೀಗ ಭಾರತದ ಸೇನೆಗೆ ಅತ್ಯಾಧುನಿಕ ಮಧ್ಯಮ ಕ್ಷೇತ್ರ ವ್ಯಾಪ್ತಿಯ ‘ಭೂಮಿಯಿಂದ ಆಗಸಕ್ಕೆ’ ಉಡಾಯಿಸಬಹುದಾದ ಕ್ಷಿಪಣಿ (ಎಂಆರ್‌ಎಸ್‌ಎಎಂ) ವ್ಯವಸ್ಥೆ ಲಭ್ಯವಾಗಲಿದೆ. ಸುಮಾರು 70 ಕಿ.ಮೀ. ವ್ಯಾಪ್ತಿಯಲ್ಲಿರುವ ಫೈಟರ್ ಜೆಟ್ ವಿಮಾನ(ಯುದ್ಧ ವಿಮಾನ)ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ.
ಶತ್ರುಪಡೆಯ ಖಂಡಾಂತರ ಕ್ಷಿಪಣಿಗಳು, ಯುದ್ದವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋಣ್ ವಿಮಾನ, ಕಣ್ಗಾವಲು ವಿಮಾನ, ‘ಅವಾಕ್ಸ್’ (ಆಗಸದಲ್ಲಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ ಇರುವ ವಿಮಾನ)ಗಳನ್ನು ಈ ಕ್ಷಿಪಣಿ ಹೊಡೆದುರುಳಿಸಬಲ್ಲದು. ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಸಹಯೋಗದೊಂದಿಗೆ ಭಾರತದ ಪ್ರಮುಖ ರಕ್ಷಣಾ ಸಂಶೋಧನೆ ಮತ್ತು ಉತ್ಪಾದನಾ ಸಂಸ್ಥೆ ಡಿಆರ್‌ಡಿಒ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಲಿದ್ದು ಈ ಕುರಿತು 17,000 ಕೋಟಿ ರೂ. ವೆಚ್ಚದ ಯೋಜನೆಗೆ ಉಭಯ ಸಂಸ್ಥೆಗಳು ಸಹಿಹಾಕಿವೆ. ಮುಂದಿನ ಮೂರು ವರ್ಷದಲ್ಲಿ ಪ್ರಥಮ ಹಂತದ ಕ್ಷಿಪಣಿಗಳು ಸೇನೆಗೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.