ವ್ಯಾಪಾರಿಯಿಂದ 1 ಲಕ್ಷ ರೂ. ದೋಚಿದ ಪೊಲೀಸ್
Update: 2017-08-27 22:10 IST
ನಾಶಿಕ್, ಆ.27: ಆಭರಣ ವ್ಯಾಪಾರಿಯಿಂದ 1 ಲಕ್ಷ ರೂ. ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸರು ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇತರ ಇಬ್ಬರನ್ನು ಬಂಧಿಸಿದ್ದಾರೆ.
ಕಾನ್‌ಸ್ಟೇಬಲ್ ಗಣೇಶ್ ಉಕಡೆ ಎಂಬಾತ ತನ್ನ ಇಬ್ಬರು ಸಹವರ್ತಿಗಳೊಂದಿಗೆ ಸೇರಿಕೊಂಡು ಕೊಲ್ಹಾಪುರ ಮೂಲದ ಆಭರಣ ವ್ಯಾಪಾರಿಯ ಕಾರನ್ನು ತಡೆದು ನಿಲ್ಲಿಸಿದ್ದಾರೆ. ತಾವು ಕ್ರೈಂಬ್ರಾಂಚ್ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡ ಮೂವರು, ಕಾರನ್ನು ತಪಾಸಣೆ ನಡೆಸುವ ನೆಪದಲ್ಲಿ ಕಾರಿನಲ್ಲಿದ್ದ 1 ಲಕ್ಷ ರೂ. ಹಣದೊಂದಿಗೆ ಪರಾರಿಯಾದರು ಎಂದು ಆಭರಣ ವ್ಯಾಪಾರಿ ರಾಜೇಂದ್ರ ಪಾಟೀಲ್ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.