×
Ad

ಗಡಿದಾಟಿದ 70 ರೋಹಿಂಗ್ಯಗಳನ್ನು ಮರಳಿ ಮ್ಯಾನ್ಮಾರ್‌ಗೆ ಹಸ್ತಾಂತರಿಸಿದ ಬಾಂಗ್ಲಾ

Update: 2017-08-27 22:47 IST

ಢಾಕಾ,ಆ.27: ಮ್ಯಾನ್ಮಾರ್ ಸೇನೆ ಹಾಗೂ ಬಂಡುಕೋರರ ನಡುವೆ ಕಳೆದ ಮೂರು ದಿನಗಳಿಂದ ಭೀಕರ ಘರ್ಷಣೆ ನಡೆಯುತ್ತಿರುವ ರಾಕ್ನೆ ರಾಜ್ಯದಿಂದ ಬಾಂಗ್ಲಾದ ಗಡಿದಾಟಲು ಯತ್ನಿಸಿದ 70 ರೋಹಿಂಗ್ಯ ಮುಸ್ಲಿಮರನ್ನು ಬಾಂಗ್ಲಾ ಸೈನಿಕರು ಬಂಧಿಸಿ, ಬಲವಂತವಾಗಿ ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸಿದ ಘಟನೆ ರವಿವಾರ ವರದಿಯಾಗಿದೆ.

 ಮ್ಯಾನ್ಮಾರ್‌ನ ಉತ್ತರದ ರಾಜ್ಯವಾದ ರಾಖಿನ್‌ನಿಂದ ಶನಿವಾರ ರಾತ್ರಿ ಬಾಂಗ್ಲಾದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ರೋಹಿಂಗ್ಯ ಮುಸ್ಲಿಮರ ಮೇಲೆ ಮ್ಯಾನ್ಮಾರ್ ಸೇನಾಪಡೆಗಳು ಮೋರ್ಟಾರ್ ಹಾಗೂ ಮೆಶಿನ್‌ಗನ್‌ಗಳಿಂದ ದಾಳಿ ನಡೆಸಿದ್ದರು.

 ಅಪಾಯವನ್ನು ಲೆಕ್ಕಿಸದೆಯೇ ಬಾಂಗ್ಲಾದ ಗಡಿದಾಟಿದ 70 ಮಂದಿ ರೋಹಿಂಗ್ಯ ಮುಸ್ಲಿಮರು ಕುಟುಪಾಲಾಂಗ್ ನಿರಾಶ್ರಿತ ಶಿಬಿರದ ದಾರಿಯಾಗಿ ನಾಲ್ಕು ಕಿ.ಮೀ. ಸಾಗಿದಾಗ ಅವರನ್ನು ಬಾಂಗ್ಲಾ ಸೈನಿಕರು ಬಂಧಿಸಿದ್ದರು ಕುಟುಪಾಲಾಂಗ್ ನಿರಾಶ್ರಿತ ಶಿಬಿರದಲ್ಲಿ ಈಗಾಗಲೇ ಸಾವಿರಾರು ರೋಹಿಂಗ್ಯ ನಿರಾಶ್ರಿತರು ನೆಲೆಸಿದ್ದಾರೆ.

  ಗಡಿದಾಟಿ ಬಂದ ಎಲ್ಲಾ 70 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಆನಂತರ ಅವರನ್ನು ಗಡಿಭದ್ರತಾ ಸೈನಿಕರು ಮ್ಯಾನ್ಮಾರ್‌ಗೆ ಹಿಂದಕ್ಕೆ ಕಳುಹಿಸಿದ್ದಾರೆ ಎಂದು ಬಾಂಗ್ಲಾದ ಸ್ಥಳೀಯ ಪೋಲೀಸ್ ವರಿಷ್ಠ ಅಬುಲ್ ಖಾಯೆರ್ ತಿಳಿಸಿದ್ದಾರೆ.

 ಈ ಮಧ್ಯೆ ಬಾಂಗ್ಲಾ ಸರಕಾರವು ಯಾವುದೇ ರೋಹಿಂಗ್ಯ ಮುಸ್ಲಿಮರು ಅಕ್ರಮವಾಗಿ ಪ್ರವೇಶಿಸುವುಕ್ಕೆ ಅನುಮತಿ ನೀಡದಂತೆ ಕಾಕ್ಸ್‌ಬಜಾರ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿರುವ ಈ ಜಿಲ್ಲೆಯಲ್ಲಿ ಹಲವಾರು ರೋಹಿಂಗ್ಯ ನಿರಾಶ್ರಿತ ಶಿಬಿರಗಳಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ.

 ಆದರೆ ತೀವ್ರವಾದ ಗಡಿ ಕಾವಲಿನ ನಡುವೆಯೂ ಸುಮಾರು3 ಸಾವಿರ ಮಂದಿ ರೋಹಿಂಗ್ಯ ಮುಸ್ಲಿಮರು ಕಳೆದ ಶುಕ್ರವಾರದಿಂದೀಚೆಗೆ ನಿರಾಶ್ರಿತ ಶಿಬಿರವನ್ನು ತಲುಪಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ರಖ್ನೆಯಲ್ಲಿ ಶುಕ್ರವಾರದಿಂದ ರೊಹಿಂಗ್ಯ ಬಂಡುಕೋರರು ಹಾಗೂ ಸರಕಾರಿ ಪಡೆಗಳ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಈವರೆಗೆ ಕನಿಷ್ಠ 100 ಮಂದಿ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News