​ಭಾರತೀಯ ಬಡವರ ಮನೆಗಳಿಗಿಂತ ಜೈಲೇ ವಾಸಿ!

Update: 2017-08-28 04:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.28: ಜೈಲುಗಳಲ್ಲಿ ಕೈದಿಗಳಿಗೆ ನಿಗದಿಪಡಿಸಿದ ಕನಿಷ್ಠ ಜಾಗಕ್ಕಿಂತಲೂ ಕಿರಿದಾದ ಮನೆಗಳಲ್ಲಿ ಭಾರತದ ಬಹುತೇಕ ಗ್ರಾಮೀಣ ಹಾಗೂ ನಗರ ನಿವಾಸಿಗಳು ಬದುಕುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ?

ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್‌ಎಸ್‌ಎಸ್‌ಒ) ನಡೆಸಿದ ಸಮೀಕ್ಷೆಯಿಂದ ಈ ಅಂಶ ಬಹಿರಂಗವಾಗಿದೆ. ಎನ್‌ಎಸ್‌ಎಸ್‌ಒ ತನ್ನ 69ನೇ ಸುತ್ತಿನ ಸಮೀಕ್ಷಾ ವರದಿಯಲ್ಲಿ ಭಾರತದ ಮನೆಗಳ ಸ್ಥಿತಿಗತಿ ಮತ್ತು 2016ರ ಮಾದರಿ ಜೈಲು ಸಂಹಿತೆಯನ್ನು ತುಲನೆ ಮಾಡಿ, ಈ ಅಂಶವನ್ನು ಪ್ರಕಟಿಸಿದೆ.

ಗ್ರಾಮೀಣ ಪ್ರದೇಶದ ಬಡಕುಟುಂಬಗಳ ಪೈಕಿ ಶೇಕಡ 80ರಷ್ಟು ಕುಟುಂಬಗಳು 449 ಚದರ ಅಡಿಗಿಂತ ಕಡಿಮೆ ಜಾಗದಲ್ಲಿ ವಾಸಿಸುತ್ತಿದ್ದಾರೆ. ಪ್ರತೀ ಕುಟುಂಬಗಳಲ್ಲಿ ಸರಾಸರಿ 4.8 ಮಂದಿ ವಾಸವಿದ್ದು, ಒಬ್ಬ ವ್ಯಕ್ತಿಗೆ 94 ಚದರ ಅಡಿ ಜಾಲ ಸಿಗುತ್ತದೆ. ಆದರೆ ಜೈಲುಸಂಹಿತೆಯ ಪ್ರಕಾರ, ಕೈದಿಯೊಬ್ಬನಿಗೆ ಜೈಲಿನಲ್ಲಿ ನೀಡಬೇಕಾದ ಕನಿಷ್ಠ ಜಾಗ 96 ಚದರ ಅಡಿ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಂತೆಯೇ ನಗರ ಪ್ರದೇಶಗಳ ಬಡಕುಟುಂಬಗಳ ಶೇಕಡ 60ರಷ್ಟು ಕುಟುಂಬಗಳು 380 ಚದರ ಅಡಿಯಲ್ಲಿ ವಾಸವಾಗಿವೆ. ಕುಟುಂಬಗಳ ಸರಾಸರಿ ಜನಸಂಖ್ಯೆ 4.1 ಇದ್ದು, ಪ್ರತೀ ಕುಟುಂಬ ಸದಸ್ಯರಿಗೆ ತಲಾ 93 ಚದರ ಅಡಿ ಜಾಗ ಬರುತ್ತದೆ.

ಇಂಥ ಇಕ್ಕಟ್ಟಿನ ಜಾಗದಲ್ಲಿ ವಾಸಿಸುವ ಬಹುತೇಕ ಮಂದಿ ದಲಿತರು ಹಾಗೂ ಆದಿವಾಸಿಗಳು. ಬಿಹಾರದಲ್ಲಿ ಅತ್ಯಂತ ಕಡಿಮೆ ಎಂದರೆ ಬಡವರಿಗೆ ವಾಸಿಸಲು ಇರುವ ಸರಾಸರಿ ಜಾಗ 66 ಚದರ ಅಡಿ. ಪರಿಶಿಷ್ಟ ಜಾತಿಯ ಬಡವರು ಸರಾಸರಿ 70.3 ಚದರ ಅಡಿ ಜಾಗ ಹೊಂದಿದ್ದರೆ, ಪರಿಶಿಷ್ಟ ಪಂಗಡದವರು 85,7 ಚದರ ಅಡಿ ಜಾಗ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News