ಜಗನ್ ರನ್ನು ಅತ್ಯಾಚಾರಿ ಗುರ್ಮೀತ್ ಗೆ ಹೋಲಿಸಿದ ಚಂದ್ರಬಾಬು ನಾಯ್ಡು!
ಹೈದರಾಬಾದ್, ಆ.28: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹಾಗೂ ಅತ್ಯಾಚಾರಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ಸ್ವಭಾವಗಳಲ್ಲಿ ಸಾಮ್ಯತೆಗಳಿವೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಜಗನ್ ಅವರು ಗುರ್ಮೀತ್ ನಂತೆಯೇ ಜನರು ಗಲಭೆ ಸೃಷ್ಟಿಸಲು ಪ್ರಚೋದನೆ ನೀಡುತ್ತಾರೆ ಎಂದವರು ಹೇಳಿದ್ದಾರೆ.
ನಂದ್ಯಾಲ್ ಉಪ ಚುನಾವಣೆಯಲ್ಲಿ ಟಿಡಿಪಿ ಜಯಗಳಿಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಗನ್ ತಮ್ಮ ನಾಲಗೆಯನ್ನು ತಾವೇ ಕಚ್ಚಿದ್ದಾರೆ. ಜಗನ್ ಡೇರಾ ಸಚ್ಚಾ ಸೌಧದ ಬಾಬನಂತೆ ಆಗಿದ್ದಾರೆ. ನಂಬಿಕೆಯ ಹೆಸರಿನಲ್ಲಿ ಆ ಬಾಬಾ ಜನರನ್ನು ವಂಚಿಸಿದ್ದರೆ, ‘ಜಗನ್ ಬಾಬ’ ವ್ಯವಸ್ಥೆಗೆ ಬೆದರಿಕೆಯಾಗಿದ್ದಾರೆ. ಅವರ ನಡವಳಿಕೆಯಲ್ಲಿ ಘನತೆಯ ಕೊರತೆಯಿದೆ. ದ್ವೇಷವನ್ನು ಹರಡುತ್ತದೆ ಎಂದು ನಾಯ್ಡು ಹೇಳಿದರು.
ಜಗನ್ ರ ಟೀಕೆ ಎಲ್ಲಾ ವ್ಯಾಪ್ತಿಯನ್ನು ದಾಟಿದೆ. ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ,. ನಾವು ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಜೊತೆ ಹೋರಾಟ ನಡೆಸಿದ್ದೇವೆ. ಆದರೆ ಯಾವ ನಾಯಕ ಕೂಡ ಇಷ್ಟೊಂದು ಕೆಳಮಟ್ಟಕ್ಕೆ ಹೋಗುವುದನ್ನು ನಾನು ನೋಡಿಲ್ಲ” ಎಂದರು.