ಸೋಲುಗಳಿಂದ ಕಂಗೆಟ್ಟಿರುವ ಶಿವಸೇನೆ!,

Update: 2017-08-28 18:50 GMT

ಫಿಲ್ಮ್‌ಸಿಟಿಯಲ್ಲಿ ಕಾರ್ಮಿಕರ ಮುಷ್ಕರ!

ಮೀರಾ ಭಾಯಂದರ್ ಮನಪಾ ಚುನಾವಣೆಯಲ್ಲಿ ಸೋತು ಶಿವಸೇನೆ ಮತ್ತೊಮ್ಮೆ ಕೈ ಕೈ ಹಿಸುಕಿಕೊಂಡಿದೆ. 2014ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಶಿವಸೇನೆ-ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಆರಂಭ ವಾಗಿದ್ದು ಈ ಮೂರು ವರ್ಷಗಳಲ್ಲಿ ಅದು ಅನೇಕ ಸಲ ಬಹಿರಂಗಗೊಂಡಿದೆ. ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ ಪತ್ರಿಕೆಯನ್ನು ಬಿಜೆಪಿಯನ್ನು ಟೀಕೆ ಮಾಡಲೆಂದೇ ಬಳಸಿಕೊಳ್ಳುತ್ತಾ ಬರುತ್ತಿದೆ. ಹಾಗಾಗಿಯೇ ಅದು ಸ್ಥಳೀಯ ಚುನಾವಣೆಗಳಲ್ಲಾಗಲಿ, ಮನಪಾ ಚುನಾವಣೆಗಳಲ್ಲಾಗಲಿ ಬಿಜೆಪಿ ಜೊತೆ ಮೈತ್ರಿಗೆ ಒಪ್ಪುತ್ತಿಲ್ಲ. ಆದರೆ ಶಿವಸೇನೆ ಮಾತ್ರ ತಾನು ದೊಡ್ಡಣ್ಣನಾಗಲು ಮಾಡುತ್ತಿರುವ ಕಸರತ್ತುಗಳೆಲ್ಲ ಯಶಸ್ವಿ ಆಗುತ್ತಿಲ್ಲ. ಪ್ರತೀ ಸಲ ಬಿಜೆಪಿ ಎದುರು ತಲೆ ತಗ್ಗಿಸುವ ಸ್ಥಿತಿ ಶಿವಸೇನೆಯದ್ದಾಗಿದೆ. ಇತ್ತೀಚೆಗೆ ನಡೆದ ಮೀರಾ-ಭಾಯಂದರ್ ಮನಪಾ ಚುನಾವಣೆಯಲ್ಲಿ ಬಿಜೆಪಿ 61 ಸೀಟುಗಳನ್ನು, ಶಿವಸೇನೆ 22 ಸೀಟುಗಳನ್ನು ಪಡೆದಿದ್ದು ಆಡಳಿತವನ್ನು ಹಿಡಿಯುವ ಕನಸನ್ನು ಶಿವಸೇನೆ ಕೈಬಿಡುವಂತಾಯಿತು.

ಎನ್‌ಸಿಪಿ ಮತ್ತು ಮ.ನ.ಸೇ. ವಿಳಾಸವೇ ಇಲ್ಲದಂತಾಯ್ತು. ಕೆಲ ತಿಂಗಳ ಹಿಂದೆ ನಡೆದ ಪನ್ವೇಲ್ ಮನಪಾ ಚುನಾವಣೆಯಲ್ಲೂ ಮೈತ್ರಿಗೆ ಒಪ್ಪದ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಿ ಒಂದೂ ಸೀಟು ಪಡೆಯದೆ ಹೀನಾಯವಾಗಿ ಸೋತಿತ್ತು. ಅಲ್ಲಿ ಬಿಜೆಪಿ ಪ್ರಚಂಡ ವಿಜಯಗಳಿಸಿ ಆಡಳಿತ ಕೈಗೆತ್ತಿಕೊಂಡಿದೆ. ಇದೀಗ ಮೀರಾ-ಭಾಯಂದರ್ ಮನಪಾ ಚುನಾವಣೆಯಲ್ಲಿ ಶಿವಸೇನೆಯೇ ಗೆಲ್ಲುವುದು ಎಂದು ಸಾಮ್ನಾದಲ್ಲಿ ನಿರಂತರ ಪ್ರಕಟಿಸುತ್ತಾ ಬಂದಿದ್ದರೂ ಶಿವಸೇನೆಗೆ ಕೇವಲ 22 ಸೀಟುಗಳು ದೊರೆತರೆ ಬಿಜೆಪಿಗೆ 61 ಸೀಟುಗಳಲ್ಲಿ ಭರ್ಜರಿ ಜಯ ದೊರೆತಿದೆ. ಎಲ್ಲೆಲ್ಲಿ ಉದ್ಧವ್ ಠಾಕ್ರೆ ಭಾಷಣ ಮಾಡಿದ್ದರೋ ಅಲ್ಲೆಲ್ಲ ಶಿವಸೇನೆ ಗೆದ್ದಿದೆ. ಎಲ್ಲೆಲ್ಲಿ ಆದಿತ್ಯ ಠಾಕ್ರೆ ಭಾಷಣ ಮಾಡಿದ್ದರೋ ಅಲ್ಲೆಲ್ಲ ಶಿವಸೇನೆ ಸೋತಿದೆ!

 ಇನ್ನೂ ವಿಶೇಷವೆಂದರೆ ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್‌ಠಾಕ್ರೆಯ ಮನಸೇ ಮತ್ತು ಶರದ್ ಪವಾರ್‌ರ ಎನ್‌ಸಿಪಿಗೆ ಒಂದೂ ಸೀಟು ದೊರೆತಿಲ್ಲ. ಪ್ರತೀದಿನ ಮುಖಪುಟದಲ್ಲಿ ಉದ್ಧವ್‌ರ ಫೋಟೋ ಹಾಕಿ ತಮ್ಮದೇ ವಿಜಯ ಎನ್ನುತ್ತಿದ್ದ ಸಾಮ್ನಾ ಫಲಿತಾಂಶದ ಮರುದಿನ ಒಳಗಿನ ಪುಟದಲ್ಲಿ ಚಿಕ್ಕ ಸುದ್ದಿ ಪ್ರಕಟಿಸಿತು. ಸೋಲಿಗೆ ಜೈನ ಮುನಿ ಪದ್ಮಸಾಗರ ಎಂಬವರು ಬಿಜೆಪಿಗೆ ಪ್ರಚಾರ ಮಾಡಿದ್ದರಿಂದ ತಾವು ಸೋತೆವು ಎಂದ ಶಿವಸೇನೆ ಈಗ ಆ ಮುನಿ ಮತ್ತು ಬಿಜೆಪಿ ವಿರುದ್ಧ ಚು.ಅಯೋಗಕ್ಕೆ ದೂರು ನೀಡಿದೆ. ಒಳಜಗಳ ಈ ನಡುವೆ ಶಿವಸೇನೆಯಲ್ಲಿ ನಡೆಯುತ್ತಿದ್ದ ಒಳಜಗಳ ಪಕ್ಷದ ಇತ್ತೀಚಿನ ಕಾರ್ಯಕಾರಿ ಸಮಿತಿಯ ಬೈಠಕ್‌ನಲ್ಲಿ ಬಹಿರಂಗಕ್ಕೆ ಬಂದಿತ್ತು. ಶಿವಸೇನೆಯ ಮಂತ್ರಿಗಳ ಮತ್ತು ಪದಾಧಿಕಾರಿಗಳ ನಡುವೆ ಮಾತಿನ ಯುದ್ಧವೇ ನಡೆಯಿತು. ನಂತರ ಉದ್ಧವ್ ಠಾಕ್ರೆಯವರೇ ಎಲ್ಲರನ್ನೂ ಸಮಾಧಾನಿಸಿ ಸ್ಥಿತಿ ಶಾಂತಗೊಳಿಸಬೇಕಾಯಿತು.

ನಮ್ಮ ಮುಖ್ಯ ರಾಜಕೀಯ ಪ್ರತಿಸ್ಪರ್ಧಿ ಬಿಜೆಪಿಯೇ ಆಗಿದೆ. ಹಾಗಾಗಿ 2019ರ ಚುನಾವಣೆಯ ತಯಾರಿಯಲ್ಲಿ ಈಗಿಂದೀಗಲೇ ಪ್ರಯತ್ನ ನಡೆಸಬೇಕಾಗಿದೆ ಎಂದು ಉದ್ಧವ್ ಠಾಕ್ರೆ ಎಲ್ಲರ ಸಹಕಾರ ಕೋರಿದರು.
* * *

ಲೈಟ್, ಕ್ಯಾಮರಾ, ಆ್ಯಕ್ಷನ್ ಬಂದ್!

ಫಿಲ್ಮ್ ಮತ್ತು ಟೆಲಿವಿಷನ್ ಶೋ ನಿರ್ಮಾಣಕ್ಕೆ ಸಂಬಂಧಿಸಿದ ಸಾವಿರಾರು ಕಾರ್ಮಿಕರು ಮುಂಬೈಯ ಗೋರೆಗಾಂವ್‌ನ ಫಿಲ್ಮ್‌ಸಿಟಿಯ ಸ್ಟುಡಿಯೋದ ಗೇಟ್‌ನ ಹೊರಗಡೆ ದೊಡ್ಡ ಪ್ರಮಾಣದಲ್ಲಿ ಒಟ್ಟು ಸೇರಿ ಧರಣಿ ಪ್ರದರ್ಶನ ಕೈಗೊಂಡರು. ಈ ಪ್ರದರ್ಶನದ ನೇತೃತ್ವವನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯ್ಸಾ ವಹಿಸಿಕೊಂಡಿತ್ತು. ಫಿಲ್ಮ್‌ಸಿಟಿ ಆಂದೋಲನ ಸಿಟಿ ಎನಿಸಿಕೊಂಡಿತು. ಫೆಡರೇಶನ್‌ನ ಮೂಲಕ ಸಿನೆಮಾ ಮತ್ತು ಟೆಲಿವಿಷನ್ ಇಂಡಸ್ಟ್ರಿಗೆ ಸಂಬಂಧಿಸಿದ 22 ಯೂನಿಯನ್‌ಗಳು ಆಗಸ್ಟ್ 14ರ ರಾತ್ರಿಯಿಂದ ಆಂದೋಲನ ಆರಂಭಿಸಿದ್ದವು. ನಂತರ ಮುಖ್ಯಮಂತ್ರಿ ಮಾತುಕತೆಗೆ ಆಹ್ವಾನಿಸಿದರು. ಈ ಮುಷ್ಕರದಿಂದಾಗಿ 37 ಧಾರಾವಾಹಿಗಳ ಶೂಟಿಂಗ್ ನಿಂತಿತು. ಫಿಲ್ಮ್‌ಸಿಟಿಯ ಹೊರಗಡೆ ಕೈಯಲ್ಲಿ ಬ್ಯಾನರ್ ಹಿಡಿದು ಸಾವಿರಾರು ಕಾರ್ಮಿಕರು ಕೆಲವು ದಿನ ಆಂದೋಲನ ಮಾಡಿದರು. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯ್ಸಾನ್ ಅಧ್ಯಕ್ಷ ಬಿ.ಎನ್. ತಿವಾರಿ ಮತ್ತು ಜನರಲ್ ಸೆಕ್ರೆಟರಿ ದಿಲೀಪ್ ಪಿಠ್‌ವಾ, ‘‘ಆಗಸ್ಟ್ 14ರ ರಾತ್ರಿಯಿಂದ ಮುಂಬೈಯ ಹೆಚ್ಚಿನ ಸ್ಟುಡಿಯೋಗಳಲ್ಲಿ ಶೂಟಿಂಗ್ ಕೆಲಸ ನಿಂತು ಹೋಗಿದೆ. ಹಾಗಿದ್ದೂ ನಿರ್ಮಾಪಕರ ಭಯದಲ್ಲಿ ಕೆಲವೆಡೆ ಶೂಟಿಂಗ್ ನಡೆಯುತ್ತಿದೆ. ಅದೂ ನಿಲ್ಲುತ್ತದೆ’’ ಎಂದಿದ್ದರು.

ಕೆಲವು ನಿರ್ಮಾಪಕರು ಗೂಂಡಾಗಿರಿ ಮಾಡುತ್ತಿದ್ದಾರೆ. ತಮ್ಮ ಕಾರ್ಮಿಕರೊಡನೆ ಮಾರಾಮಾರಿ ನಡೆಸಲಾಗಿದೆ ಎನ್ನುವ ಆರೋಪ ಕೂಡಾ ಯೂನಿಯನ್ ಮಾಡಿದೆ.
ಒಂದು ಗಂಟೆಯ ಶಿಫ್ಟ್ (ಡ್ಯೂಟಿ) ಮತ್ತು ಹೆಚ್ಚುವರಿ ಪ್ರತಿ ಗಂಟೆಗೆ ದ್ವಿಗುಣ ಪೇಮೆಂಟ್ ಯೂನಿಯನ್‌ನ ಪ್ರಮುಖ ಬೇಡಿಕೆ. ಪ್ರತೀ 5 ವರ್ಷಕ್ಕೆ ಸಹಿ ಪಡೆಯಲಾಗುತ್ತದೆ. ಆಗ ಹೊಸ ಎಗ್ರಿಮೆಂಟ್‌ನಲ್ಲಿ ಸಂಬಳ, ಸಮಯದ ಮಿತಿ, ವಿಮೆ....ಇತ್ಯಾದಿಗಳನ್ನು ತಿಳಿಸಲಾಗುತ್ತದೆ. ಆದರೆ ಈಗ ಸಂಬಳ ಮೂರು ತಿಂಗಳಿಗೊಮ್ಮೆ ನೀಡುವುದೂ ಇದೆ. ಹಾಗೂ 16-18 ಗಂಟೆ ಕಾಲ ಕೆಲಸ ಮಾಡಿಸಲಾಗುತ್ತದೆ ಎನ್ನುತ್ತಾರೆ ಕಾರ್ಮಿಕರು. ಈ ಆಂದೋಲನದಿಂದ ‘ಕೌನ್ ಬನೇಗಾ ಕರೋಡ್‌ಪತಿ’ ಸಹಿತ ಹಲವಾರು ಧಾರಾವಾಹಿಗಳ ಶೂಟಿಂಗ್ ನಿಂತು ಹೋಯಿತು. ಯೂನಿಯನ್ ಹೇಳಿದಂತೆ 2.5 ಲಕ್ಷ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡರು. ಹಾಗೂ ನೂರಕ್ಕೂ ಹೆಚ್ಚು ಧಾರಾವಾಹಿಗಳ ಶೂಟಿಂಗ್ ನಿಂತು ಹೋಯಿತು. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯ್ಸಾ ಸಹಿತ ಅನ್ಯ 22 ಸಂಘಟನೆಗಳು ಆಂದೋಲನದಲ್ಲಿ ಭಾಗವಹಿಸಿದವು. ವೇತನದಲ್ಲಿ 20 ಪ್ರತಿಶತ ವೃದ್ಧಿಗೆ ಕಾರ್ಮಿಕರು ಒಪ್ಪಿದ್ದರು. ಆದರೆ ನಿರ್ಮಾಪಕರು 7.5 ಪ್ರತಿಶತ ಮಾತ್ರ ನೀಡಬಹುದು ಎನ್ನುತ್ತಿದ್ದಾರೆ.
* * *

ಹಿಜಿಡಾಗಳ ರ್ಯಾಲಿ
ತಮಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ ಎಂದು ಮುಂಬೈಯ ಹಿಜಿಡಾಗಳು ‘ಕಿನ್ನರ್ ಮಾ’ ಮತ್ತು ‘ಅಖಿಲ್ ಕಿನ್ನರ್ ಸೇವಾ ಸಮಿತಿ’ಯ ಬ್ಯಾನರ್‌ನಲ್ಲಿ ಆಗಸ್ಟ್ ಕ್ರಾಂತಿ ಮೈದಾನದಿಂದ ಗಿರ್‌ಗಾಂವ್ ಚೌಪಾಟಿ ತನಕ ಮೊನ್ನೆ ರ್ಯಾಲಿ ಹೊರಟು ಪ್ರತಿಭಟನೆ ಹಮ್ಮಿಕೊಂಡರು.

ಮುಂಬೈಯ ಹಿಜಿಡಾಗಳು ಈ ದಿನಗಳಲ್ಲಿ ತುಂಬಾ ಕಿರಿಕಿರಿಗೆ ಒಳಗಾಗಿದ್ದಾರಂತೆ. ಕಿನ್ನರ್ ಮಾ ಸಂಘಟನೆಯ ಟ್ರಸ್ಟಿ ಪ್ರಿಯಾಂಕಾ ಅವರು ತಿಳಿಸಿದಂತೆ ನಕಲಿ ಹಿಜಿಡಾಗಳು ಎಲ್ಲಾ ಅಪರಾಧಿಕ ಚಟುವಟಿಕೆಗಳಲ್ಲಿ ಒಳಗೊಂಡಿದ್ದಾರೆ. ಇದರಿಂದಾಗಿ ಅಸಲಿ ಹಿಜಿಡಾಗಳ ಹೆಸರು ಹಾಳಾಗುತ್ತಿದೆಯಂತೆ. ಈ ಬಗ್ಗೆ ಪೊಲೀಸರಿಗೂ ಅನೇಕ ಬಾರಿ ಮಾಹಿತಿ ನೀಡಲಾಗಿದೆ. ಆದರೆ ನಕಲಿ-ಅಸಲಿ ಹಿಜಿಡಾಗಳ ನಡುವೆ ಪೊಲೀಸರು ಕೂಡಾ ಗೊಂದಲಕ್ಕೀಡಾಗಿದ್ದಾರೆ. ಇದರ ಲಾಭವನ್ನು ನಕಲಿ ಹಿಜಿಡಾಗಳು ಸಾಕಷ್ಟು ಎತ್ತಿಕೊಳ್ಳುತ್ತಿದ್ದಾರೆ ಎನ್ನುವುದು ಅಸಲಿ ಹಿಜಿಡಾಗಳ ಅಳಲು.
‘‘ನಕಲಿ ಹಿಜಿಡಾಗಳ ವಿರುದ್ಧ ದೂರು ನೀಡಿದ್ದರಿಂದ ಗೋರೆಗಾಂವ್‌ನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಸಮಾಜದಲ್ಲಿ ಇನ್ನೂ ನಮಗೆ ಸಮಾನ ಅಧಿಕಾರ ಪಡೆಯಲು ಒದ್ದಾಡುತ್ತಿದ್ದೇವೆ’’ ಎಂದು ಅಖಿಲ್ ಕಿನ್ನರ್ ಸೇವಾ ಸಮಿತಿ ಟ್ರಸ್ಟ್‌ನ ಸೊನಾಲಿ ಚೌಫೇಕರ್ ದು:ಖ ತೋಡಿಕೊಂಡಿದ್ದಾರೆ.
* * *

ನವೆಂಬರ್‌ನಿಂದ ಎರಡನೆ ಹಂತದ ಮೋನೋ ರೈಲು!

ಮೆಟ್ರೋ ರೈಲು ಓಡಾಟದ ಎದುರು ನಷ್ಟ ಅನುಭವಿಸುತ್ತಿರುವ ಮೋನೋ ರೈಲಿನ ದ್ವಿತೀಯ ಹಂತದ ಮಾರ್ಗ ಸಿದ್ಧಗೊಳ್ಳುತ್ತಿದ್ದು ಈಗಾಗಲೇ ಶೇಕಡಾ 90 ಪರೀಕ್ಷೆಗಳು ಮುಗಿದಿದ್ದು ಸೆಪ್ಟಂಬರ್‌ನಲ್ಲಿ ರೈಲ್ವೆ ಸುರಕ್ಷಾ ಆಯುಕ್ತರಿಂದ ಹಸಿರು ನಿಶಾನೆ ಸಿಗಬಹುದಾಗಿದೆ.

ಮೋನೋ ರೈಲಿನ ಎರಡನೆ ಹಂತದ ವಿಶೇಷತೆ ಎಂದರೆ ಇದು ಪಶ್ಚಿಮ, ಮಧ್ಯ ಮತ್ತು ಹಾರ್ಬರ್ ಮೂರೂ ಲೋಕಲ್ ರೈಲು ನಿಲ್ದಾಣಗಳಿಗೆ ಹತ್ತಿರವಿರುವುದು. ಇದು ಮುಂಬೈಯ ವಡಾಲಾ (ಹಾರ್ಬರ್)ದಿಂದ ಮಧ್ಯ ರೈಲ್ವೆಯ ಕರಿರೋಡ್ ಸ್ಟೇಷನ್ ದಾಟಿ ಪಶ್ಚಿಮ ರೈಲ್ವೆಯ ಮಹಾಲಕ್ಷ್ಮೀ ಸ್ಟೇಷನ್‌ಗಳ ಬಳಿಯಿಂದ ಹಾದು ಜ್ಯಾಕಬ್ ಸರ್ಕಲ್‌ವರೆಗೆ ಓಡಾಡುವುದು. ರೈಲ್ವೆ ಸುರಕ್ಷಾ ಆಯುಕ್ತರ ಮಂಜೂರು ಪಡೆಯಲು ಎಂಎಂಆರ್‌ಡಿಎ ಸೆಪ್ಟಂಬರ್‌ನಲ್ಲಿ ಅರ್ಜಿ ಸಲ್ಲಿಸಲಿದೆ. ಹಾಗೂ ನವೆಂಬರ್‌ನಿಂದ ಮೋನೋ ರೈಲು ಎರಡನೆ ಹಂತದ ಸೇವೆಯ ಲಾಭವನ್ನು ಮುಂಬೈಕರ್ ಪಡೆದುಕೊಳ್ಳಲು ಸಾಧ್ಯವಾಗಬಹುದು.

ವಿಶೇಷ ಅಂದರೆ ಎರಡನೆ ಹಂತದ ಮೋನೋ ರೈಲು ಶುರು ಮಾಡಲು ಈಗಾಗಲೇ 16 ಬಾರಿ ಅಂತಿಮ ತಾರೀಕು ಹೇಳಲಾಗಿದ್ದರೂ ಯಶಸ್ಸು ಆಗಿರಲಿಲ್ಲ. ಇದರಿಂದ ಎಂಎಂಆರ್‌ಡಿಎ ಕೂಡಾ ಕಿರಿಕಿರಿಗೆ ಒಳಗಾಗಿದೆ. ಇದೀಗ ಮತ್ತೊಂದು ದಿನಾಂಕವನ್ನು ಎಂಎಂಆರ್‌ಡಿಎ ನಿಶ್ಚಯಿಸಿದೆ. ಅದು ಈ ವರ್ಷದ ನವೆಂಬರ್‌ನ ಮಧ್ಯ ಭಾಗ!

* * *

ಹಣವಿಲ್ಲದ ಕೈದಿಗಳಿಗೆ ಕಾರ್ಪೊರೇಟ್ ಜಾಮೀನು ಸ್ಕೀಮ್
ಮಹಾರಾಷ್ಟ್ರದ ಅಧಿಕಾಂಶ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಕೈದಿಗಳನ್ನಿರಿಸಲಾಗಿದೆ. ಇದೀಗ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಕಡಿಮೆ ಮಾಡುವುದಕ್ಕಾಗಿ ಸರಕಾರ ಸಿ.ಎಸ್.ಆರ್. ಅರ್ಥಾತ್ ಉದ್ಯೋಗ ಜಗತ್ತಿನ ಸಹಾಯ ಪಡೆಯಲಿದೆ.

ಇಂದು ಜಾಮೀನು ಪಡೆಯಲು ಹಣ ನೀಡಲು ಸಾಧ್ಯವಿಲ್ಲದ ದೊಡ್ಡ ಸಂಖ್ಯೆಯ ಕೈದಿಗಳು ಜೈಲುಗಳಲ್ಲಿದ್ದಾರೆ. ಅನೇಕರಿಗೆ ಸಾವಿರ ರೂಪಾಯಿಗಳ ಜಾಮೀನು ಹಣ ಕಟ್ಟಲೂ ಸಾಧ್ಯವಿಲ್ಲದಷ್ಟು ಬಡತನವಿದೆ. ಇಂತಹ ಕೈದಿಗಳನ್ನು ಗುರುತಿಸಿ ಅಂತಹವರಿಗೆ ಸಿ.ಎಸ್.ಆರ್. (ಕಾರ್ಪೊರೇಟ್ ಸೋಶಲ್ ರೆಸ್ಪಾನ್ಸಿಬಿಲಿಟಿ) ಅನ್ವಯ ಜಾಮೀನಿಗಾಗಿ ಆರ್ಥಿಕ ಸಹಾಯ ಪಡೆಯಲು ವಿಚಾರ ವಿಮರ್ಶೆ ನಡೆಯುತ್ತಿದೆ.

ರಾಜ್ಯದ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಅಧಿಕ ಇರುವ ಕಾರಣ ಅಮಾನವೀಯ ರೀತಿಯಲ್ಲಿ ಅವರೆಲ್ಲ ಉಳಕೊಳ್ಳುವ ಸ್ಥಿತಿ ಇದೆ. ಜೂನ್ 2017ರ ತನಕ ರಾಜ್ಯದ ಜೈಲುಗಳಲ್ಲಿ 31,417 ಕೈದಿಗಳಿದ್ದರು. ಆದರೆ ರಾಜ್ಯದ ಜೈಲುಗಳಲ್ಲಿ 23,942 ಕೈದಿಗಳನ್ನು ಮಾತ್ರ ಇರಿಸಬಹುದಾಗಿದೆ. ಅಂದರೆ ಜೈಲುಗಳ ಸಾಮರ್ಥ್ಯಕ್ಕಿಂತ 31.22 ಶೇಕಡಾ ಅಧಿಕ ಕೈದಿಗಳಿದ್ದಾರೆ.

ಇನ್ನು ಮುಂಬೈ ಮತ್ತು ಅಕ್ಕಪಕ್ಕದ ನಗರಗಳಲ್ಲಿನ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಅಧಿಕ ಕೈದಿಗಳನ್ನು ಇರಿಸಲಾಗಿದೆ. ಯಾರಿಗೆ ಜಾಮೀನು ಪಡೆಯಲು ಸಾಧ್ಯವಿದೆಯೋ ಅವರಲ್ಲಿ ಅನೇಕರಿಗೆ ಹಣದ ಅಡಚಣೆಯಿರುವುದರಿಂದ ಜೈಲುಗಳು ತುಂಬಿ ತುಳುಕುತ್ತಿವೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News