ನ್ಯಾಯಾಲಯದ ಮುಂದೆ ಎರಡನೇ ಬಾರಿ ಹಾಜರಾದ ಪುರೋಹಿತ್
Update: 2017-08-29 18:52 IST
ಮುಂಬೈ, ಆ. 29: ಕಳೆದ ವಾರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದುಕೊಂಡ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಲೆ. ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರು.
ಸರಿಸುಮಾರು 9 ವರ್ಷಗಳ ಕಾಲ ಕಾರಾಗೃಹದಲ್ಲಿದ್ದ ಪುರೋಹಿತ್‌ಗೆ ಜಾಮೀನು ದೊರಕಿದ ಬಳಿಕ ನ್ಯಾಯಾಲಯದ ಮುಂದೆ ಹಾಜರಾಗುತ್ತಿರುವುದು ಇದು ಎರಡನೇ ಬಾರಿ. ಆಗಸ್ಟ್ 23ರಂದು ಪುರೋಹಿತ್ ರನ್ನು ನವಿ ಮುಂಬೈಯ ತಲೋಜಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಸೇನಾ ಸಿಬ್ಬಂದಿ ಬೆಂಗಾವಲಿನೊಂದಿಗೆ ಪುರೋಹಿತ್ ಇಂದು ಎನ್‌ಐಎಯ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು. ಆರೋಪ ಪಟ್ಟಿ ರೂಪಿಸುವ ಕುರಿತ ವಿಚಾರಣೆ ಸೆಪ್ಟಂಬರ್ 6ರ ವರೆಗೆ ಮುಂದುವರಿಯಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್ ತಿಳಿಸಿದ್ದಾರೆ.