ಈಗ ಮ್ಯೂಚ್ಯುವಲ್ ಫಂಡ್ ಹೂಡಿಕೆಗೆ ಆಧಾರ್ ಜೋಡಣೆ ಕಡ್ಡಾಯ
ಹೊಸದಿಲ್ಲಿ,ಆ.31: ಮ್ಯೂಚ್ಯುವಲ್ ಫಂಡ್ ಹೌಸ್‌ಗಳು ತಮ್ಮ ಗ್ರಾಹಕರ ಆಧಾರ್ಸಂಖ್ಯೆಗಳನ್ನು ಪಡೆದುಕೊಳ್ಳುವುದನ್ನು ಮತ್ತು ಅವುಗಳನ್ನು ಅವರ ಖಾತೆಗಳೊಂದಿಗೆ ಜೋಡಣೆಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇತ್ತೀಚಿಗೆ ಹಣ ಚಲುವೆ ತಡೆ ಕಾಯ್ದೆ(ಪಿಎಂಎಲ್‌ಎ) ನಿಯಮಗಳು,2017ರಲ್ಲಿ ತಿದ್ದುಪಡಿಗಳನ್ನು ತಂದ ಬಳಿಕ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ.
ನೋಂದಣಿ ಮತ್ತು ವರ್ಗಾವಣೆ(ಆರ್‌ಟಿ) ಏಜೆನ್ಸಿ ಆಗಿರುವ ಕಂಪ್ಯೂಟರ್ ಏಜ್ ಮ್ಯಾನೇಜ್‌ಮೆಂಟ್ ಸರ್ವಿಸಿಸ್(ಸಿಎಎಂಎಸ್) ಮ್ಯೂಚ್ಯುವಲ್ ಫಂಡ್ ಹೂಡಿಕೆ ಗಳನ್ನು ಆಧಾರ್‌ಗೆ ಜೋಡಣೆ ಮಾಡಲು ಆನ್‌ಲೈನ್ ಸೌಲಭ್ಯವನ್ನು ಆರಂಭಿಸಿದೆ.
‘‘ಪಿಎಂಎಲ್‌ಎ ನಿಯಮಾವಳಿಗಳು,2017ಕ್ಕೆ ಇತ್ತೀಚಿಗೆ ಮಾಡಿರುವ ತಿದ್ದುಪಡಿಗಳಂತೆ ಮ್ಯೂಚ್ಯುವಲ್ ಫಂಡ್‌ಗಳಂತಹ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಆಧಾರ್ ಸಂಖ್ಯೆಗಳನ್ನು ಪಡೆದುಕೊಂಡು ಅವರ ಖಾತೆಗಳಿಗೆ ಜೋಡಣೆ ಮಾಡುವುದು ಕಡ್ಡಾಯ ವಾಗಿದೆ ಎಂದು ಸಿಎಎಂಎಸ್‌ನ ಜಾಲತಾಣದಲ್ಲಿ ಸ್ಪಷ್ಟಪಡಿಸಲಾಗಿದೆ.
ಕಾರ್ವಿ ಮತ್ತು ಸುಂದರಂ ಬಿಎನ್‌ಪಿ ಪರಿಬಾಸ್ ಫಂಡ್ ಸರ್ವಿಸಿಸ್‌ನಂತಹ ಇತರ ಆರ್‌ಟಿ ಏಜೆನ್ಸಿಗಳು ಈ ಸೇವೆಯನ್ನು ಇನ್ನಷ್ಟೇ ಆರಂಭಿಸಬೇಕಿದೆ. ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚ್ಯುವಲ್ ಫಂಡ್ ಇದಕ್ಕಾಗಿ ತನ್ನದೇ ಆದ ಆರ್‌ಟಿ ಏಜೆನ್ಸಿ ಫ್ರಾಂಕಲಿನ್ ಟೆಂಪಲ್ಟನ್ ಅಸೆಟ್ ಮ್ಯಾನೇಜ್‌ಮೆಂಟ್ ಅನ್ನು ಬಳಸುತ್ತಿದೆ.
ಮ್ಯೂಚ್ಯುವಲ್ ಫಂಡ್‌ಗಳು ತಮ್ಮ ಎಲ್ಲ ಗ್ರಾಹಕರ ಖಾತೆಗಳಿಗೆ ಆಧಾರ್ ಜೋಡಣೆಗೊಳಿಸಲು 2017,ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಈ ಜೋಡಣೆಯನ್ನು ಕಡ್ಡಾಯಗೊಳಿಸಿರುವುದರಿಂದ ಆಧಾರ್ ಸಂಖ್ಯೆಗಳನ್ನು ಒದಗಿಸು ವಂತೆ ತಮ್ಮ ಗ್ರಾಹಕರಿಗೆ ಸಂದೇಶಗಳನ್ನು ರವಾನಿಸಲು ಮ್ಯೂಚ್ಯುವಲ್ ಫಂಡ್ ಸಂಸ್ಥೆಗಳು ಸಜ್ಜಾಗುತ್ತಿವೆ. ಸಿಎಎಂಎಸ್‌ನ ಆನ್‌ಲೈನ್ ಸೌಲಭ್ಯವು ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ.
ಮ್ಯೂಚ್ಯುವಲ್ ಫಂಡ್‌ಗಳ ಹೂಡಿಕೆದಾರರು ನೇರವಾಗಿ ಸಿಎಎಂಎಸ್‌ನ ಜಾಲತಾಣದ ಮೂಲಕ ತಮ್ಮ ಆಧಾರ ಸಂಖ್ಯೆಯನ್ನು ತಮ್ಮ ಹೂಡಿಕೆ ಖಾತೆಗಳಿಗೆ ಜೋಡಿಸಬಹುದಾಗಿದೆ.