×
Ad

ಫೋನ್‌ನಲ್ಲಿ ಮಾತನಾಡುತ್ತಿದ್ದ ಗೆಳತಿ ಅಪಹೃತನ ವಿಮೋಚನೆಗೆ ನೆರವಾದಳು

Update: 2017-08-31 16:31 IST

ಹೊಸದಿಲ್ಲಿ,ಆ.31: ಇಲ್ಲಿಯ ರೋಹಿಣಿ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಒತ್ತೆಹಣಕ್ಕಾಗಿ ಉದ್ಯಮಿಯೋರ್ವನನ್ನು ಅಪಹರಿಸಿದ್ದ ದುಷ್ಕರ್ಮಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಅಪಹೃತನನ್ನು ವಿಮೋಚನೆಗೊಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಉದ್ಯಮಿಯ ಜಿಪಿಎಸ್ ಆಧಾರದಲ್ಲಿ ಸುಮಾರು ಹತ್ತು ಕಿಮೀ ದೂರ ಸಾಗಿದ್ದಾಗ ಪಂಕ್ಚರ್ ಆಗಿದ್ದ ಕಾರಿನ ಚಕ್ರವನ್ನು ಬದಲಿಸುತ್ತಿದ್ದ ಅಪಹರಣಕಾರರು ಪೊಲೀಸರ ಕೈಗೆ ಸಿಕ್ಕಿದ್ದರು. ಗುಂಡುಗಳ ಹಾರಾಟದ ಬಳಿಕ ಇಬ್ಬರನ್ನು ಬಂಧಿಸಲಾ ಗಿದೆ. ಉದ್ಯಮಿಯನ್ನು ಕೈಕಾಲುಗಳನ್ನು ಕಟ್ಟಿ ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಲಾಗಿತ್ತು.

ಅಂದು ರಾತ್ರಿ ಅಲಿಪುರದಲ್ಲಿರುವ ತನ್ನ ಫ್ಯಾಕ್ಟರಿಯಿಂದ ಮನೆಗೆ ಮರಳುತ್ತಿದ್ದ ಉದ್ಯಮಿ ನಿತೀಶ ಅರೋರಾ ಗೆಳತಿಯ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ಅವರನ್ನು ಅಪಹರಿಸಲಾಗಿತ್ತು. ದುಷ್ಕರ್ಮಿಗಳು ಅರೋರಾ ಜೊತೆ ಮಾತನಾಡಿದ್ದನ್ನು ಕೇಳಿಸಿ ಕೊಂಡಿದ್ದ ಆಕೆ ತಕ್ಷಣವೇ ಅವರ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಳು.

ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಅರೋರಾರ ಕಾರಿಗೆ ಜಿಪಿಎಸ್ ಅಳವಡಿಸಿದ್ದಲಾಗಿದ್ದರಿಂದ ಅದರ ಜಾಡು ಹಿಡಿದು ಬೆನ್ನಟ್ಟಿದ್ದರು. ಸಿಂಗು ಗಡಿಯ ಬಳಿ ಅರೋರಾರ ಕಾರು ನಿಂತಿದ್ದು, ಅಪಹರಣಕಾರರು ಪಂಕ್ಚರ್ ಆಗಿದ್ದ ಚಕ್ರವನ್ನು ಬದಲಿಸುತ್ತಿದ್ದರು. ಪೊಲೀಸರು ಅವರ ಬಳಿ ತೆರಳಿದಾಗ ನಾಡಪಿಸ್ತೂಲಿನಿಂದ ಗುಂಡುಗಳನ್ನು ಹಾರಿಸಿದ್ದರು. ಪೊಲೀಸರು ಪ್ರತಿದಾಳಿ ನಡೆಸಿದಾಗ ಅಂಕಿತ್ ಚೌಹಾಣ್ ಎಂಬಾತ ಗಾಯಗೊಂಡಿದ್ದ. ಆತನನ್ನು ಮತ್ತು ವಿವೇಕ್ ಅಲಿಯಾಸ್ ಆರ್ಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗುವಲ್ಲಿ ಸಫಲನಾಗಿದ್ದಾನೆ.

 ಅರೋರಾ ತನ್ನ ಫ್ಯಾಕ್ಟರಿಯಿಂದ ಹೊರಟಾಗಿನಿಂದಲೇ ತಮ್ಮ ಸ್ವಿಫ್ಟ್ ಕಾರಿನಲ್ಲಿ ಕೆಲವು ಕಿ.ಮೀ.ವರೆಗೆ ಅವರ ಕಾರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಅವರನ್ನು ತಡೆದು ಅಪಹರಿಸಿದ್ದರು. ಮೂವರು ಅರೋರಾರ ಕಾರಿನಲ್ಲಿದ್ದರೆ, ಇಬ್ಬರು ಸ್ವಿಫ್ಟ್ಟ್ ಕಾರಿನಲ್ಲಿ ತೆರಳಿದ್ದರು.

ಆರೋಪಿಗಳು ನೊಯ್ಡದ ಖೋಡಾ ಕಾಲನಿ ನಿವಾಸಿಗಳಾಗಿದ್ದು, ಅರೋರಾರ ಕುಟುಂಬದಿಂದ ಎರಡು ಕೋ.ರೂ.ಒತ್ತೆಹಣವನ್ನು ಕಿತ್ತುಕೊಳ್ಳಲು ಉದ್ದೇಶಿಸಿದ್ದರು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News