ಕೊಲೆ ಪ್ರಕರಣದಲ್ಲಿ ಜೆಡಿಯು ಶಾಸಕಿಯ ಪುತ್ರ ರಾಕಿ ಯಾದವ್ ತಪ್ಪಿತಸ್ಥ
ಪಾಟ್ನಾ,ಆ.31: ಕಳೆದ ವರ್ಷದ ಮೇ ತಿಂಗಳಲ್ಲಿ ತನ್ನ ಕಾರನ್ನು ಹಿಂದಿಕ್ಕಿದ್ದಕ್ಕಾಗಿ ಹದಿಹರೆಯದ ಯುವಕನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ರಾಕಿ ಯಾದವ್ ಅಪರಾಧಿಯೆಂದು ಗಯಾದ ನ್ಯಾಯಾಲಯವು ಘೋಷಿಸಿದೆ. ರಾಕಿ ಜೆಡಿಯುನಿಂದ ಅಮಾನತುಗೊಂಡಿರುವ ಶಾಸಕಿ ಮನೋರಮಾ ದೇವಿಯವರ ಪುತ್ರನಾಗಿದ್ದಾನೆ.
ಆದಿತ್ಯ ಸಚ್ ದೇವ(19) ಕೊಲೆಯಾಗಿರುವ ಯುವಕ. ತನ್ನ ನಾಲ್ವರು ಸ್ನೇಹಿತರೊಂದಿಗೆ 12ನೇ ತರಗತಿಯ ಪರೀಕ್ಷೆಗಳು ಮುಗಿದ ಸಂಭ್ರಮಾಚರಣೆಯಿಂದ ಮನೆಗೆ ಮರಳುತ್ತಿದ್ದ ಆದಿತ್ಯ ಕಾರನ್ನು ಚಲಾಯಿಸುತ್ತಿದ್ದು, ಮಾರ್ಗಮಧ್ಯೆ ರಾಕಿ ಚಲಾಯಿಸುತ್ತಿದ್ದ ಲ್ಯಾಂಡ್ ರೋವರ್ ಕಾರನ್ನು ಓವರ್‌ಟೇಕ್ ಮಾಡಿದ್ದ. ಇದರಿಂದ ಕೆರಳಿದ್ದ ಆತ ತನ್ನ ಪಿಸ್ತೂಲಿನಿಂದ ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದ್ದ. ಹೀಗಾಗಿ ಆದಿತ್ಯ ಮತ್ತು ಗೆಳೆಯರು ತಮ್ಮ ಕಾರನ್ನು ನಿಲ್ಲಿಸುವುದು ಅನಿವಾರ್ಯವಾಗಿತ್ತು. ರಾಕಿ ಹಾರಿಸಿದ್ದ ಇನ್ನೊಂದು ಗುಂಡು ಕಾರಿನ ಹಿಂದಿನ ಗಾಜನ್ನು ತೂರಿಕೊಂಡು ಆದಿತ್ಯಗೆ ಬಡಿದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.
ಮೇ 11ರಂದು ರಾಕಿಯನ್ನು ಬಂಧಿಸಲಾಗಿತ್ತಾದರೂ, ಆತ ಅಕ್ಟೋಬರ್‌ನಲ್ಲಿ ಉಚ್ಚ ನ್ಯಾಯಾಲಯದಿಂದ ಜಾಮೀನು ಬಿಡುಗಡೆಗೊಂಡಿದ್ದ. ಆದರೆ ಇದರ ವಿರುದ್ಧ ರಾಜ್ಯ ಸರಕಾರವು ಮೇಲ್ಮನವಿ ಸಲ್ಲಿಸಿದ್ದು, ಕೆಲವುದಿನಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ಜಾಮೀನನ್ನು ರದ್ದುಗೊಳಿಸಿದ್ದರಿಂದ ಆತನನ್ನು ಪುನಃ ಬಂಧಿಸಲಾಗಿತ್ತು. ಆತ ಹಾಲಿ ಗಯಾ ಜೈಲಿನಲ್ಲಿದ್ದಾನೆ.
ಘಟನೆಯ ಬಳಿಕ ರಾಕಿಯ ತಾಯಿ ಮನೋರಮಾ ದೇವಿಯನ್ನು ಜೆಡಿಯುದಿಂದ ಅಮಾನತುಗೊಳಿಸಲಾಗಿತ್ತು. ತಂದೆ ಬಿಂದಿ ಯಾದವ ಪ್ರಭಾವಿ ಉದ್ಯಮಿಯಾಗಿದ್ದು, ರಾಕಿಯನ್ನು ರಕ್ಷಿಸಲು ಸಾಕ್ಷಾಧಾರಗಳನ್ನು ನಾಶ ಮಾಡಿದ್ದ ಆರೋಪಿಯಾಗಿದ್ದಾನೆ.