ಬಿಆರ್‌ಡಿ ಕಾಲೇಜಿನ ಪ್ರಾಂಶುಪಾಲ ಮತ್ತು ಪತ್ನಿಗೆ ನ್ಯಾಯಾಂಗ ಬಂಧನ
Update: 2017-08-31 17:51 IST
ಗೋರಖ್‌ಪುರ,ಆ.31: ಏಳು ದಿನಗಳಲ್ಲಿ 60 ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ಇಲ್ಲಿಯ ಬಿಆರ್‌ಡಿ ಮೆಡಿಕಲ್ ಕಾಲೇಜಿನ ಅಮಾನತುಗೊಂಡಿರುವ ಪ್ರಾಂಶುಪಾಲ ರಾಜೀವ್ ಮಿಶ್ರಾ ಮತ್ತು ಅವರ ಪತ್ನಿ ಪೂರ್ಣಿಮಾ ಮಿಶ್ರಾ ಅವರಿಗೆ ಸ್ಥಳೀಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಅವರನ್ನು ಎರಡು ದಿನಗಳ ಹಿಂದೆ ಕಾನ್ಪುರದಲ್ಲಿ ಬಂಧಿಸಲಾಗಿತ್ತು.
ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಮಕ್ಕಳು ಸಾವನ್ನಪ್ಪಿದ ದುರಂತದ ಬಳಿಕ ಉತ್ತರ ಪ್ರದೇಶ ಸರಕಾರವು ಮಿಶ್ರಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.
ಆಮ್ಲಜನಕ ಪೂರೈಕೆ ಕಂಪನಿಗೆ ಹಣ ಪಾವತಿ ತಡೆಹಿಡಿದದ್ದು ಸೇರಿದಂತೆ ಹಲವಾರು ಆರೋಪಗಳನ್ನು ಮಿಶ್ರಾ ದಂಪತಿ ಎದುರಿಸುತ್ತಿದ್ದಾರೆ. ಕರ್ತವ್ಯಚ್ಯುತಿ ಸೇರಿದಂತೆ ವಿವಿಧ ಆರೋಪಗಳಲ್ಲಿ ಮಿಶ್ರಾ ಮತ್ತು ಇತರ ಏಳು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.