ರಾಜಸ್ಥಾನ ಆಸ್ಪತ್ರೆಯಲ್ಲಿ ಎರಡು ತಿಂಗಳಲ್ಲಿ 86 ಶಿಶುಗಳ ಮರಣ
ಜೈಪುರ,ಸೆ.1: ರಾಜಸ್ಥಾನದ ಜಿಲ್ಲಾಸ್ಪತ್ರೆಯೊಂದರಲ್ಲಿ ಕಳೆದ 2 ತಿಂಗಳ ಅವಧಿಯಲ್ಲಿ 86 ನವಜಾತ ಶಿಶುಗಳು ಮರಣ ಹೊಂದಿವೆ. ಈ ಪೈಕಿ 37 ಶಿಶುಗಳು ವೈದ್ಯರ ನಿರ್ಲಕ್ಷತನಕ್ಕೆ ಬಲಿಯಾಗಿವೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ನವಜಾತ ಶಿಶುಗಳ ಅಕಾಲಿಕ ಮರಣದ ಬಗ್ಗೆ ತನಿಖೆ ನಡೆಸಿರುವ ಬನ್‌ಸ್ವಾರ ಜಿಲ್ಲೆಯ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯಾಧಿಕಾರಿ ಡಾ. ಎಚ್.ಎಲ್. ತಬಿಯಾರ್, ಜುಲೈ ಹಾಗೂ ಆಗಸ್ಟ್‌ನಲ್ಲಿ 4 ವಾರಕ್ಕೂ ಕಡಿಮೆ ಅವಧಿಯ 86 ಶಿಶುಗಳು ಮರಣ ಹೊಂದಿವೆ. 86 ಶಿಶುಗಳ ಪೈಕಿ 37 ಶಿಶುಗಳನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ವೈದ್ಯರ ನಿರ್ಲಕ್ಷತನದಿಂದ ಶಿಶುಗಳು ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಶಿಶುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕಾಲಿಚರಣ್ ಸರಫ್ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆಸಿದ ಡಾ.ತಬಿಯಾರ್ ಮೂರು ದಿನಗಳಲ್ಲಿ ವರದಿ ಸಲ್ಲಿಸಿದ್ದಾರೆ. ತಬಿಯಾರ್ ತನ್ನ ವರದಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯವಿರುವ 72 ವೈದ್ಯರ ಪೈಕಿ 32 ವೈದ್ಯರನ್ನು ಭರ್ತಿ ಮಾಡಲಾಗಿದೆ. ಶೇ.80ರಷ್ಟು ಹುದ್ದೆ ಖಾಲಿಯಿದೆ ಎಂದು ಹೇಳಿದ್ದಾರೆ.