×
Ad

ಸಾಯಿಪಲ್ಲವಿಗೆ ಟಾಲಿವುಡ್ ‘ಫಿದಾ’

Update: 2017-09-02 16:46 IST

‘ಫಿದಾ’ ಚಿತ್ರದ ಪ್ರಚಂಡ ಯಶಸ್ಸಿನ ಬಳಿಕ ಸಾಯಿಪಲ್ಲವಿ, ಟಾಲಿವುಡ್‌ನ ಬಹುಬೇಡಿಕೆಯ ನಟಿಯೆನಿಸಿದ್ದಾರೆ. ಜುಲೈ 21ರಂದು ತೆರೆಕಂಡ ಫಿದಾ ಚಿತ್ರದಲ್ಲಿ ಅದ್ಬುತವಾದ ಅಭಿನಯ ನೀಡಿರುವ ಸಾಯಿಪಲ್ಲವಿ ಈಗ ತೆಲುಗು ಚಿತ್ರರಸಿಕರ ಮನೆಮಾತಾಗಿದ್ದಾರೆ. ಟಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಚಿತ್ರದಲ್ಲಿ ನಟಿಸಲು ಆಕೆಗೆ ಆಫರ್‌ಗಳ ಸುರಿಮಳೆಯಾಗುತ್ತಿದೆ. ಆದರೆ ಅತ್ಯಂತ ಚ್ಯೂಸಿ ನಟಿಯಾಗಿರುವ ಸಾಯಿಪಲ್ಲವಿ ಉತ್ತಮ ಕಥೆ, ಪಾತ್ರವಿರುವ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.

ಇಷ್ಟಕ್ಕೂ, ಫಿದಾದ ಭರ್ಜರಿ ಗೆಲುವು ಸ್ವತಃ ಸಾಯಿಪಲ್ಲವಿಗೇ ಅಚ್ಚರಿತಂದಿದೆಯಂತೆ. ಚಿತ್ರ ಗೆಲ್ಲಬಹುದು, ಆದರೆ ಪ್ರೇಕ್ಷಕರಿಂದ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ದೊರೆಯುವುದೆಂದು ತಾನು ಅಂದುಕೊಂಡಿರಲೇ ಇಲ್ಲವೆಂದು ಆಕೆ ಹೇಳಿದ್ದಾರೆ.

ಚಿತ್ರದ ನಾಯಕಿ, ಗ್ರಾಮೀಣ ಯುವತಿ ಭಾನುಮತಿಯ ಪಾತ್ರಕ್ಕಾಗಿ ನೈಜತೆ ತುಂಬಲು ಭಾನುಮತಿ ತುಂಬಾನೆ ಹೋಂ ವರ್ಕ್ ಮಾಡಿದ್ದರು. ಚಿತ್ರವಿಡೀ ಮೇಕಪ್ ಇಲ್ಲದೆ ಅಭಿನಯಿಸುವ ಮೂಲಕ ಸಾಯಿಪಲ್ಲವಿ, ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಕೂಡಾ ಆರಂಭಿಸಿದ್ದಾರೆ.

ಶೇಖರ್ ಕಮ್ಮುಲಾ ನಿರ್ದೇಶನದ ಫಿದಾ ಚಿತ್ರದಲ್ಲಿ ಉದಯೋನ್ಮುಖ ನಟ ವರುಣ್ ತೇಜ್ ಹೀರೋ. 2005ರಲ್ಲಿ ಬಿಡುಗಡೆಯಾದ ಕಸ್ತೂರಿಮಾನ್ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದ ಸಾಯಿಪಲ್ಲವಿ ಈತನಕ ನಟಿಸಿದ್ದು 5 ಚಿತ್ರಗಳಲ್ಲಿ ಮಾತ್ರ. ಆದರೆ 2015ರ ಸೂಪರ್‌ಹಿಟ್ ಮಲಯಾಳಂ ಚಿತ್ರ ಪ್ರೇಮಂ, ಆಕೆಗೆ ಭಾರೀ ಹೆಸರು ತಂದುಕೊಟ್ಟಿತು.. ಆನಂತರ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ ಕಲಿ ಚಿತ್ರ ಕೂಡಾ ಭರ್ಜರಿ ಗೆಲುವು ಕಂಡಿತ್ತು. ಇದೀಗ ಫಿದಾ ಆಕೆಯನ್ನು ದಕ್ಷಿಣ ಭಾರತದ ಸೂಪರ್‌ಹಿರೋಯಿನ್‌ಗಳ ಸಾಲಿಗೆ ಸೇರಿಸಿದೆ.

ಪ್ರಸ್ತುತ ಈಗ ಖ್ಯಾತಿಯ ನಾಣಿ ನಾಯಕನಾಗಿರುವ ಮಿಡಲ್‌ಕ್ಲಾಸ್ ಅಬ್ಬಾಯಿ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. ಈ ಮಧ್ಯೆ ನಾಗಾಚೈತನ್ಯ ಅಭಿನಯದ ಚಿತ್ರಕ್ಕೂ ಆಕೆ ಕಾಲ್ ಶೀಟ್ ನೀಡಿದ್ದಾರೆ.ಎಂಬಿಬಿಎಸ್ ಪದವೀಧರೆಯಾದ ಸಾಯಿಪಲ್ಲವಿ, ಅಭಿನಯದ ಜೊತೆ ವೈದ್ಯ ವೃತ್ತಿಯಲ್ಲೂ ಮುಂದುವರಿಯಲು ಇಚ್ಛಿಸಿದ್ದಾರಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News