ವೋಟಿಗಾಗಿ ನ್ಯೂಟನ್
ಟಾಯ್ಲೆಟ್ ಏಕ್ ಪ್ರೇಮ್‌ಕಥಾ, ಸ್ವಚ್ಛ ಭಾರತ ಆಂದೋಲನದಿಂದ ಪ್ರೇರಿತವಾಗಿದ್ದರೆ, ಇದೀಗ ಇನ್ನೊಂದು ಸಾಮಾಜಿಕ ಜಾಗೃತಿಯ ಉದ್ದೇಶವಿರುವ ಇನ್ನೊಂದು ಚಿತ್ರ ತೆರೆಕಾಣಲು ಸಜ್ಜಾಗಿದೆ. ಅಮಿತ್ ವಿ.ಮಸೂರ್‌ಕರ್ ನಿರ್ದೇಶನದ ‘ನ್ಯೂಟನ್‘ ಚಿತ್ರವು ಮತದಾನದ ಮಹತ್ವದ ಬಗ್ಗೆ ಶ್ರೀಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.
ರಾಜ್‌ಕುಮಾರ್ ರಾವ್ ನಾಯಕನಾಗಿ ನಟಿಸಿರುವ ಈ ಚಿತ್ರವು, ‘ನೀವು ಬದಲಾಗದೆ ಇದ್ದಲ್ಲಿ, ಯಾವುದೂ ಬದಲಾಗದು’ ಎಂಬ ಸಂದೇಶವನ್ನು ಸಾರುತ್ತದೆ, ಚಿತ್ರದ ಕಥಾನಾಯಕ ನ್ಯೂಟನ್, ಆದರ್ಶಗಳಲ್ಲಿ ನಂಬಿಕೆಯಿಟ್ಟ ವ್ಯಕ್ತಿ. ನಕ್ಸಲೀಯರ ಪ್ರಾಬಲ್ಯದ ಪ್ರದೇಶಗಳಲ್ಲಿ ಆತ ಚುನಾವಣಾಕರ್ತವ್ಯಕ್ತೆ ತೆರಳಿದಾಗ ಉಂಟಾಗುವ ಘಟನಾವಳಿಗಳನ್ನು ಚಿತ್ರದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ತೋರಿಸಲಾಗಿದೆಯಂತೆ. ನಕ್ಸಲರ ಬೆದರಿಕೆಯಿಂದಾಗಿ, ಜೀವಭಯದಿಂದ ಮತದಾನದಲ್ಲಿ ಪಾಲ್ಗೊಳ್ಳದ ಗ್ರಾಮಸ್ಥರು,ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಲಾಗದೆ ಅನುಭವಿಸುವ ತುಮುಲ ವನ್ನು ಈ ಚಿತ್ರದಲ್ಲಿ ಮಾರ್ಮಿಕವಾಗಿ ಬಿಂಬಿಸಲಾಗಿದೆಯಂತೆ. ನ್ಯೂಟನ್ ಚಿತ್ರವು ಮತದಾನ ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸದ ವ್ಯಕ್ತಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಲಿದೆಯೆಂದು ನಾಯಕನಟ ರಾಜ್‌ಕುಮಾರ್ ರಾವ್ ಹೇಳಿಕೊಂಡಿದ್ದಾರೆ. ನ್ಯೂಟನ್ ಚಿತ್ರದ ಟ್ರೇಲರ್‌ಗೂ ಸಖತ್ ರೆಸ್ಪಾನ್ಸ್ ದೊರೆತಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ನ್ಯೂಟನ್, ಸೆಪ್ಟಂಬರ್ 22ರಂದು ತೆರೆಕಾಣಲಿದ್ದಾನೆ.