ಒಂದೇ ವಾರದಲ್ಲಿ 100 ಕೋಟಿ ರೂ. ಬಾಚಿದ 'ವಿವೇಗಂ'

Update: 2017-09-02 11:25 GMT

ಬಿಡುಗಡೆಗೆ ಮುನ್ನವೇ ಸದ್ದು ಮಾಡಿದ್ದ ತಲ ಅಜಿತ್ ಅಭಿನಯದ ‘ವಿವೇಗಂ’ನ ಅಬ್ಬರ ರಿಲೀಸ್‌ನ ನಂತರವೂ ಮುಂದುವರಿದಿದೆ. ಆಗಸ್ಟ್ 24ರಂದು ತೆರೆಕಂಡ ಈ ಚಿತ್ರವು ಕೇವಲ ಒಂದು ವಾರದಲ್ಲಿ 100 ಕೋಟಿ ರೂ. ಬಾಚಿದೆ. ಭಾರತಾದ್ಯಂತ ‘ವಿವೇಗಂ’ 69 ಕೋಟಿ ರೂ. ಕಮಾಯಿಸಿದ್ದು, ಜಗತ್ತಿನಾದ್ಯಂತ ಇತರ ರಾಷ್ಟ್ರಗಳಲ್ಲಿ ಅದು 36.50 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಚಿತ್ರವು ಶತಕೋಟಿ ಕ್ಲಬ್‌ಗೆ ಸೇರ್ಪಡೆಗೊಂಡಂತಾಗಿದೆ.

‘ವಿವೇಗಂ’ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ, ಗಲ್ಲಾ ಪೆಟ್ಟಿಗೆಯಲ್ಲಿ ಚಿತ್ರ ಗಳಿಕೆ ನಾಗಾಲೋಟದಲ್ಲಿ ಓಡುತ್ತಿದೆ. ಮೊದಲ ನಾಲ್ಕು ದಿನಗಳಲ್ಲೇ ತಮಿಳುನಾಡಿನಲ್ಲಿ ಚಿತ್ರವು ಬರೋಬ್ಬರಿ 48.50 ಕೋಟಿ ರೂ. ಸಂಪಾದಿಸಿದೆ.

‘ವಿವೇಗಂ’ ಚಿತ್ರದ ಎದುರು ಬಾಕ್ಸ್‌ಆಫೀಸ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗದೆಂಬ ಹಿಂಜರಿಕೆಯಿಂದಾಗಿ ಕಳೆದ ವಾರ ಬೇರಾವುದೇ ಕಾಲಿವುಡ್ ಚಿತ್ರಗಳು ತೆರೆಕಂಡಿರಲಿಲ್ಲ. ತೆರೆಕಂಡ ಮೊದಲ ದಿನದ ಪ್ರದರ್ಶನಗಳಲ್ಲಿ ಟಿಕೆಟ್‌ಗಳು ಕೆಲವೇ ಕೆಲವು ನಿಮಿಷಗಳಲ್ಲಿ ಮಾರಾಟವಾಗಿದ್ದವು. ಪ್ರೇಕ್ಷಕರ ಒತ್ತಡದಿಂದಾಗಿ ಹಲವು ಚಿತ್ರ ಮಂದಿರಗಳು ವಿಶೇಷ ಪ್ರದರ್ಶನಗಳನ್ನೂ ಏರ್ಪಡಿಸಿದ್ದವು. ರೋಮಾಂಚಕವಾದ ಆ್ಯಕ್ಷನ್ ದೃಶ್ಯಗಳಿರುವ ವಿವೇಗಂನಲ್ಲಿ ಅಜಿತ್‌ಗೆ ನಾಯಕಿಯಾಗಿ ಕಾಜಲ್ ಅಗರ್‌ವಾಲ್ ನಟಿಸಿದ್ದಾರೆ.

ಕಮಲ್ ಹಾಸನ್‌ರ ದ್ವಿತೀಯ ಪುತ್ರಿ ಅಕ್ಷರ ಹಾಸನ್ ಕೂಡಾ ಇದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಚಿತ್ರದೊಂದಿಗೆ ಖಳನಾಯಕನಾಗಿ ಕಾಲಿವುಡ್ ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News