ಕ್ಲೀನ್‌ಸ್ವೀಪ್‌ನತ್ತ ಟೀಮ್ ಇಂಡಿಯಾ ಚಿತ್ತ

Update: 2017-09-02 18:34 GMT

ಕೊಲಂಬೊ, ಸೆ.2: ಐದನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯ ರವಿವಾರ ಇಲ್ಲಿ ನಡೆಯಲಿದ್ದು, ಸತತ ಗೆಲುವಿನಿಂದ ಬೀಗುತ್ತಿರುವ ಭಾರತ ಆತಿಥೇಯ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡುವತ್ತ ಚಿತ್ತವಿರಿಸಿದೆ.

ಕೊಹ್ಲಿ ಪಡೆ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಈಗಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಗುರಿ ಹಾಕಿಕೊಂಡಿದೆ.

ಮತ್ತೊಂದೆಡೆ ಶ್ರೀಲಂಕಾ ತಂಡ ಸತತ ಎರಡನೆ ಬಾರಿ 5-0 ಅಂತರದಿಂದ ಏಕದಿನ ಸರಣಿ ಕಳೆದುಕೊಳ್ಳುವ ಅಪಾಯದಲ್ಲಿದೆ. 2014ರಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ದ್ವಿಪಕ್ಷೀಯ ಸರಣಿಯಲ್ಲಿ ಶ್ರೀಲಂಕಾ ತಂಡ ಭಾರತ ವಿರುದ್ಧ 5-0 ಅಂತರದಿಂದ ಸೋತಿತ್ತು. ಇದೀಗ ಲಂಕಾ ತಂಡ ಮತ್ತೊಮ್ಮೆ ವೈಟ್‌ವಾಶ್‌ಗೆ ಒಳಗಾದರೆ ತೀವ್ರ ಹಿನ್ನಡೆ ಅನುಭವಿಸುತ್ತದೆ.

ಶ್ರೀಲಂಕಾ ಪ್ರಸ್ತುತ ಸರಣಿಯಲ್ಲಿ ಎರಡು ಪಂದ್ಯಗಳನ್ನು ಜಯಿಸಲು ವಿಫಲವಾಗಿ 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿದೆ.

ಭಾರತ 2014-15ರಲ್ಲಿ ಕೊನೆಯ ಬಾರಿ ಏಕದಿನ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡಿತ್ತು. ಆನಂತರ ಝಿಂಬಾಬ್ವೆ ವಿರುದ್ದ ಎರಡು ಬಾರಿ 3-0 ಹಾಗೂ 2013ರಲ್ಲಿ 5-0 ಅಂತರದಿಂದ ಸೋಲಿಸಿತ್ತು.

 ಭಾರತ 2010-11 ಹಾಗೂ 2012-13ರಲ್ಲಿ ಕ್ರಮವಾಗಿ ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್‌ನ ವಿರುದ್ಧ ಸ್ವದೇಶದಲ್ಲಿ 5-0 ಅಂತರದಿಂದ ಸರಣಿ ಜಯಿಸಿದ ಸಾಧನೆ ಮಾಡಿತ್ತು.

10 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ತಂಡ ಮಾತ್ರ ಭಾರತ ವಿರುದ್ಧ ಎರಡು ಬಾರಿ(2008-09,2012-13) 5-0 ಅಂತರದಿಂದ ಸೋತಿರುವ ಏಕೈಕ ತಂಡವಾಗಿದೆ.

ಭಾರತ ತಂಡದ ಆಟಗಾರರಲ್ಲಿ ಯಾವುದೇ ಗಾಯದ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ರವಿವಾರದ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಮನೀಶ್ ಪಾಂಡೆ, ಕುಲ್‌ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಮತ್ತೊಂದು ಅವಕಾಶ ಪಡೆಯಲಿದ್ದಾರೆ.

ಎಲ್ಲ 3 ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಬೌಲರ್‌ಗಳ ಕಾರ್ಯಭಾರವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾದ ಅಗತ್ಯವಿದೆ ಎಂದು ಕೋಚ್ ರವಿ ಶಾಸ್ತ್ರಿ ಶುಕ್ರವಾರ ಹೇಳಿದ್ದರು. ಭಾರತ ಸ್ವದೇಶದಲ್ಲಿ ಹಲವು ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡುತ್ತಿರುವ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿ ಕೇದಾರ್ ಜಾಧವ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯೂ ಇದೆ.

ಸರಣಿಯಲ್ಲಿ ಕೊಹ್ಲಿ ಪಡೆ ನಡೆಸಿರುವ ಪ್ರಯೋಗ ಹಾಗೂ ಆವರ್ತನಾ ನಿಯಮದಲ್ಲಿ ಅಜಿಂಕ್ಯ ರಹಾನೆಗೆ ಈತನಕ ಅವಕಾಶ ಸಿಕ್ಕಿಲ್ಲ. ರೋಹಿತ್ ಶರ್ಮ ಹಾಗೂ ಶಿಖರ ಧವನ್ ಭರ್ಜರಿ ಫಾರ್ಮ್‌ನಲ್ಲಿದ್ದ ಕಾರಣ ಟೀಮ್ ಮ್ಯಾನೇಜ್‌ಮೆಂಟ್ ಆರಂಭಿಕ ಜೋಡಿಯನ್ನು ಈತನಕ ಬೇರ್ಪಡಿಸಲಾಗಿಲ್ಲ.

 ಧವನ್ ಅಸೌಖ್ಯದಿಂದಿರುವ ತಾಯಿಯನ್ನು ನೋಡಲು ರವಿವಾರ ಸ್ವದೇಶಕ್ಕೆ ವಾಪಸಾಗುತ್ತಿದ್ದು, ಸೆ.3 ಹಾಗೂ ಸೆ.6(ಟ್ವೆಂಟಿ-20)ರಂದು ನಡೆಯುಲಿರುವ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ದಿಲ್ಲಿ ದಾಂಡಿಗ ಧವನ್ ಸರಣಿಯಲ್ಲಿ ಎರಡು ಶತಕ ದಾಖಲಿಸಿದ್ದಾರೆ.

ಧವನ್ ಅನುಪಸ್ಥಿತಿಯಲ್ಲಿ ಮೂರನೆ ಆರಂಭಿಕ ಆಟಗಾರನಾಗಿರುವ ಮುಂಬೈ ದಾಂಡಿಗ ರಹಾನೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ರಹಾನೆ ಕಳೆದ ವೆಸ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಶತಕ ಹಾಗೂ 3 ಅರ್ಧಶತಕಗಳ ಸಹಿತ ಒಟ್ಟು 336 ರನ್ ಗಳಿಸಿ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು.

 ಮುಂದಿನ ವರ್ಷ ವಿಶ್ವಕಪ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆ.ಎಲ್. ರಾಹುಲ್‌ಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಲಾಗಿದೆ. ಆದರೆ ಅವರು 4, 17 ಹಾಗೂ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಎಲ್ಲ ಮೂರು ಪಂದ್ಯಗಳಲ್ಲಿ ಅಕಿಲಾ ಧನಂಜಯಗೆ ವಿಕೆಟ್ ಒಪ್ಪಿಸಿದ್ದರು.

ರಾಹುಲ್ ವೈಫಲ್ಯದಿಂದಾಗಿ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ತಂಡದ ಯೋಜನೆ ಫಲಕಾರಿಯಾಗಿಲ್ಲ. ನಾಲ್ಕನೆ ಏಕದಿನದಲ್ಲಿ ಅರ್ಧಶತಕ ಸಿಡಿಸಿದ ಮನೀಷ್ ಪಾಂಡೆ ತನಗೆ ಲಭಿಸಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇದೇ ವೇಳೆ, ಶ್ರೀಲಂಕಾ ತಂಡ ಅಂತಿಮ-11ರ ಬಳಗದಲ್ಲಿ ಕೇವಲ ಒಂದು ಬದಲಾವಣೆ ಮಾಡುವ ನಿರೀಕ್ಷೆಯಿದೆ. ನಿಧಾನಗತಿಯ ಬೌಲಿಂಗ್‌ನಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ನಾಯಕ ಉಪುಲ್ ತರಂಗ ತಂಡಕ್ಕೆ ವಾಪಸಾಗುತ್ತಿದ್ದಾರೆ. ತರಂಗ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಲಹಿರು ತಿರಿಮನ್ನೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

<ಪಂದ್ಯ ಆರಂಭದ ಸಮಯ: ಮಧ್ಯಾಹ್ನ 2:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News