ಮೈದಾನ ಜಲಾವೃತವಾಗಿ ಪ್ರಾರ್ಥನೆಗೆ ಅಡ್ಡಿ: ಗುರುದ್ವಾರದಲ್ಲಿ ಈದ್ ನಮಾಝ್ ನಿರ್ವಹಿಸಿದ ಮುಸ್ಲಿಮರು
ಡೆಹ್ರಾಡೂನ್, ಸೆ.3: ಭಾರೀ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತ ಪರಿಣಾಮ ಈದುಲ್ ಅಝ್ ಹಾ ನಮಾಝ್ ನಿರ್ವಹಿಸಲು ಸಾಧ್ಯವಾಗದೆ ಕಂಗಾಲಾಗಿದ್ದ ಮುಸ್ಲಿಮರಿಗೆ ಸ್ಥಳೀಯ ಸಿಖ್ಖರು ಗುರುದ್ವಾರದಲ್ಲಿ ಈದ್ ನಮಾಝ್ ನಿರ್ವಹಿಸಲು ಅವಕಾಶ ನೀಡಿದ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದೆ.
ಕಳೆದ ಕೆಲ ವಾರಗಳಿಂದ ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿತ್ತು. ಇದರಿಂದಾಗಿ ಮೈದಾನದಲ್ಲೂ ನೀರು ನಿಂತಿತ್ತು. ಶನಿವಾರ ಈದ್ ನಮಾಝ್ ನಿರ್ವಹಿಸಲು ಬಂದ ಮುಸ್ಲಿಮರು ಕಂಗಾಲಾಗಿದ್ದರು. ಈ ಸಂದರ್ಭ ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯ ಸಿಖ್ಖರು ಗುರುದ್ವಾರದಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿದರು. ಅದರಂತೆ ಜೋಶಿಮಠ್, ಗೋವಿಂದ್ ಘಾಟ್ ಹಾಗೂ ಪಿಪಾಲ್ ಕೋಟಿಯ ಸುಮಾರು 1,000 ಮುಸ್ಲಿಮರು ಗುರುದ್ವಾರದಲ್ಲಿ ನಮಾಝ್ ನಿರ್ವಹಿಸಿದರು.
ಇನ್ಸ್ ಪೆಕ್ಟರ್ ಸಂಜಯ್ ಕುಮಾರ್, ಎಸ್ ಡಿಎಂ ಯೋಗೇಂದ್ರ ಸಿಂಗ್ ಹಾಗೂ ಗುರುದ್ವಾರ ಆಡಳಿತ ಸಮಿತಿಯ ಸದಸ್ಯರು ತಕ್ಷಣ ಕಾರ್ಯಪ್ರವೃತ್ತರಾಗಿ ಗುರುದ್ವಾರದಲ್ಲಿ ನಮಾಝ್ ಗಾಗಿ ಸ್ಥಳಾವಕಾಶದ ವ್ಯವಸ್ಥೆ ಮಾಡಿದರು.
“ಇದರಿಂದ ನಾವು ತುಂಬಾ ಸಂತಸಗೊಂಡಿದ್ದೇವೆ. ಗುರುದ್ವಾರ ಆಡಳಿತ ಸಮಿತಿಯ ಈ ಕಾರ್ಯ ನಿಜವಾದ ಸಹೋದರತೆಯನ್ನು ಪ್ರತಿಬಿಂಬಿಸಿದೆ. ನಾವು ತುಂಬಾ ಸಂತಸಗೊಂಡಿದ್ದೇವೆ. ಪ್ರತಿಯೊಬ್ಬರೂ ಅನುಸರಿಸಬೇಕಾದ ಕಾರ್ಯ ಇದಾಗಿದೆ” ಎಂದು ಮುಹಮ್ಮದ್ ಅಸ್ಲಂ ಎನ್ನುವವರು ಹೇಳಿದ್ದಾರೆ.
“ಈ ಪ್ರದೇಶದಲ್ಲಿ ಮಸೀದಿಯಿಲ್ಲ. ಗಾಂಧಿ ಮೈದಾನದಲ್ಲಿ ವರ್ಷಂಪ್ರತಿ ಈದ್ ನಮಾಝ್ ನಿರ್ವಹಿಸಲಾಗುತ್ತಿತ್ತು. ಇದು ಗುರುದ್ವಾರದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಮೈದಾನದಲ್ಲಿ ನೀರು ನಿಂತು ಮುಸ್ಲಿಮರಿಗೆ ನಮಾಝ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಅರಿತು ಗುರುದ್ವಾರ ಸಮಿತಿ ಈ ಕಾರ್ಯ ಕೈಗೊಂಡಿತು” ಎಂದಿದ್ದಾರೆ. ಗುರುದ್ವಾರ ಆಡಳಿತ ಸಮಿತಿಯ ಮ್ಯಾನೇಜರ್ ಬುಟಾ ಸಿಂಗ್ ಹೇಳಿದ್ದಾರೆ.