×
Ad

ಜೆಎನ್‌ಯು ಪದವೀಧರೆ ನೂತನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Update: 2017-09-03 20:11 IST

ಹೊಸದಿಲ್ಲಿ, ಸೆ.3: ಸಚಿವ ಸಂಪುಟದ ಪುನರಚನೆಯ ಸಂದರ್ಭ ಕ್ಯಾಬಿನೆಟ್ ದರ್ಜೆಗೆ ಭಡ್ತಿ ಪಡೆದ ಜೊತೆಗೆ ಮಹತ್ವದ ರಕ್ಷಣಾ ಇಲಾಖೆಯ ನೂತನ ಸಚಿವೆಯಾಗಿ ನೇಮಕವಾಗಿರುವ ನಿರ್ಮಲಾ ಸೀತಾರಾಮನ್ ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದವರು.

 ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ ಗೋವದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ತೆರವಾಗಿದ್ದ ರಕ್ಷಣಾ ಖಾತೆಯ ಹೊಣೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಹೆಚ್ಚುವರಿಯಾಗಿ ವಹಿಸಲಾಗಿತ್ತು.

ನೆರೆರಾಷ್ಟ್ರ ಚೀನಾ ಗಡಿಭಾಗದಲ್ಲಿ ಹಾಗೂ ಹಿಂದೂಮಹಾಸಾಗರ ಪ್ರದೇಶದಲ್ಲಿ ತಗಾದೆ ಮುಂದುವರಿಸಿರುವಂತೆಯೇ , ದೇಶಕ್ಕೆ ಪೂರ್ಣಪ್ರಮಾಣದ ರಕ್ಷಣಾ ಸಚಿವರ ಅಗತ್ಯವಿದೆ ಎಂಬ ಆಗ್ರಹದ ನಡುವೆಯೇ ಈ ಹೊಣೆಯನ್ನು ಇದೀಗ ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಿಕೊಡಲಾಗಿದೆ.

 ಪೂರ್ಣ ಹೊಣೆಗಾರಿಕೆಯ ರಕ್ಷಣಾ ಸಚಿವರಾಗಿರುವ ಭಾರತದ ಪ್ರಪ್ರಥಮ ಮಹಿಳೆ ಯಾಗಿರುವ ನಿರ್ಮಲಾ, ತಮಿಳುನಾಡಿನವರು. ತಿರುಚಿನಾಪಳ್ಳಿಯ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ದಿಲ್ಲಿಉ ಜವಾಹರ್‌ಲಾಲ್ ನೆಹರೂ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

  1986ರಲ್ಲಿ ಪರಕಳ ಪ್ರಭಾಕರ್ ಎನ್ನುವವರನ್ನು ವಿವಾಹವಾದ ಬಳಿಕ ಲಂಡನ್‌ನಲ್ಲಿ ನೆಲೆಸಿದ್ದ ನಿರ್ಮಲಾ 1991ರಲ್ಲಿ ಭಾರತಕ್ಕೆ ಮರಳಿದ್ದರು. ನಿರ್ಮಲಾ ಪತಿ ಹಾಗೂ ಪತಿಯ ಕುಟುಂಬದವರು ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದರು. ಆದರೆ ನಿರ್ಮಲಾ ಬಿಜೆಪಿಯ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿರುವುದು ವಿಶೇಷವಾಗಿದೆ. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವಿದ್ದಾಗ ಇವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಹುದ್ದೆಯಲ್ಲಿ 2005ರವರೆಗೆ ಮುಂದುವರಿದರು. ಆ ಬಳಿಕ ಸುಷ್ಮಾ ಸ್ವರಾಜ್ ಅವರ ಸಂಪರ್ಕಕ್ಕೆ ಬಂದ ನಿರ್ಮಲಾ, ಸುಷ್ಮಾ ಆಹ್ವಾನದ ಮೇರೆಗೆ 2006ರಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. 2010ರಲ್ಲಿ ಗಡ್ಕರಿ ಬಿಜೆಪಿಯ ಅಧ್ಯಕ್ಷರಾಗಿದ್ದ ಸಂದರ್ಭ ನಿರ್ಮಲಾರನ್ನು ಬಿಜೆಪಿಯ ವಕ್ತಾರೆಯನ್ನಾಗಿ ನೇಮಿಸಲಾಯಿತು.2014ರಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ನಿರ್ಮಲಾ ಸೀತಾರಾಮನ್ ವಾಣಿಜ್ಯ ಇಲಾಖೆಯ ಸಚಿವೆಯಾಗಿ ನೇಮಕವಾದರು.

ಈ ಹಿಂದೆ ಇಂದಿರಾಗಾಂಧಿಯವರು ಎರಡು ಬಾರಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ರಕ್ಷಣಾ ಸಚಿವರ ಹೊಣೆ ನಿಭಾಯಿಸಿದ ದೇಶದ ಪ್ರಥಮ ಮಹಿಳೆಯಾಗಿದ್ದಾರೆ. 1975ರ ಡಿಸೆಂಬರ್‌ನಲ್ಲಿ 20 ದಿನದ ಅವಧಿಯಲ್ಲಿ ಹಾಗೂ 1980ರ ಜನವರಿಯಿಂದ ಸುಮಾರು 2 ವರ್ಷದ ಅವಧಿಯಲ್ಲಿ ಇಂದಿರಾಗಾಂಧಿ ಈ ಮಹತ್ವದ ಹೊಣೆಯನ್ನು ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News