ಬ್ರಿಕ್ಸ್ ಶೃಂಗಸಭೆಯಲ್ಲಿ ಫಲಪ್ರದ ಮಾತುಕತೆಯ ನಿರೀಕ್ಷೆ: ಮೋದಿ
ಬೀಜಿಂಗ್, ಸೆ.3: ಚೀನದ ಕ್ಸಿಯಮೆನ್‌ನಲ್ಲಿ ಸೋಮವಾರ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಆಗಮಿಸಿದ್ದು , ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಬಲಿಷ್ಟ ಸಹಕಾರ ಸಂಬಂಧ ಏರ್ಪಡುವ ಕುರಿತು ಫಲಪ್ರದ ಮಾತುಕತೆ ನಡೆಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ಎರಡು ದಿನದ ಚೀನಾ ಭೇಟಿಯ ಸಂದರ್ಭ ಮೋದಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಭೆಯ ಸಂದರ್ಭ ಈಜಿಪ್ಟ್, ಕೆನ್ಯ, ತಜಿಕಿಸ್ತಾನ್, ಮೆಕ್ಸಿಕೊ ಮತ್ತು ಥೈಲ್ಯಾಂಡ್ ದೇಶಗಳನ್ನು ಅತಿಥಿರಾಷ್ಟ್ರಗಳ ನೆಲೆಯಲ್ಲಿ ಚೀನಾವು ಆಹ್ವಾನಿಸಿದ್ದು ಈ ರಾಷ್ಟ್ರಗಳ ಮುಖಂಡ ಜೊತೆ ಮಾತುಕತೆ ನಡೆಸಲು ಉತ್ಸುಕನಾಗಿರುವುದಾಗಿ ಮೋದಿ ಹೇಳಿದ್ದಾರೆ. ಗೋವಾದಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗ್ಗೆ ರಚನಾತ್ಮಕ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಚೀನಾದ ನೇತೃತ್ವದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಮಧ್ಯೆ ಬಲಿಷ್ಟ ಸಹಭಾಗಿತ್ವ ಸಂಬಂಧವನ್ನು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.
ಬ್ರೆಝಿಲ್-ರಶ್ಯ-ಭಾರತ-ಚೀನಾ-ದಕ್ಷಿಣ ಆಫ್ರಿಕ(ಬ್ರಿಕ್ಸ್) ಶೃಂಗಸಭೆಯ ನೇಪಥ್ಯದಲ್ಲಿ ಈ ರಾಷ್ಟ್ರಗಳೊಡನೆ ದ್ವಿಪಕ್ಷೀಯ ಮಾತುಕತೆ ನಡೆಸುವ ಅವಕಾಶ ದೊರೆಯಲಿದೆ ಎಂದ ಮೋದಿ, ಭಾರತವು ‘ಬ್ರಿಕ್ಸ್’ನ ಮಹತ್ವವನ್ನು ಅರಿತುಕೊಂಡಿದೆ. ಜಾಗತಿಕ ಸವಾಲುಗಳನ್ನು ಎದುರಿಸಲು ಹಾಗೂ ವಿಶ್ವಶಾಂತಿ ಮತ್ತು ಜಾಗತಿಕ ಭದ್ರತೆಯ ನಿಟ್ಟಿನಲ್ಲಿ ‘ಬ್ರಿಕ್ಸ್’ಗೆ ಮಹತ್ವದ ಪಾತ್ರವಿದೆ ಎಂದು ಹೇಳಿದರು.
ಸೆಪ್ಟೆಂಬರ್ 5ರಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಆತಿಥ್ಯದಲ್ಲಿ ನಡೆಯಲಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರ ಹಾಗೂ ಇತರ 9 ರಾಷ್ಟ್ರಗಳ ಸಭೆಯನ್ನು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದರು. ಅಲ್ಲದೆ, ಐದು ಸದಸ್ಯ ರಾಷ್ಟ್ರಗಳ ಪ್ರಮುಖ ಕೈಗಾರಿಕೋದ್ಯಮಿಗಳು ಪ್ರತಿನಿಧಿಸುವ ಬ್ರಿಕ್ಸ್ ವ್ಯಾಪಾರ ಸಮಿತಿಯ ಜೊತೆ ಸಂವಾದ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ಮೋದಿ ತಿಳಿಸಿದ್ದಾರೆ.